ನಿತಿನ್ ಗಡ್ಕರಿ
ನವದೆಹಲಿ: ‘ಮುಂದಿನ ನಾಲ್ಕರಿಂದ ಆರು ತಿಂಗಳಿನಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇ.ವಿ) ಬೆಲೆಯು ಪೆಟ್ರೋಲ್ ವಾಹನಗಳ ಬೆಲೆಗೆ ಸಮನಾಗುವ ನಿರೀಕ್ಷೆ ಇದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮುಂದಿನ ಐದು ವರ್ಷದೊಳಗೆ ದೇಶದ ವಾಹನೋದ್ಯಮವನ್ನು ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ಸೋಮವಾರ ನಡೆದ ‘ಫಿಕ್ಕಿ ಉನ್ನತ ಶಿಕ್ಷಣ ಶೃಂಗಸಭೆ–2025’ರಲ್ಲಿ ಹೇಳಿದ್ದಾರೆ.
‘ನಾನು ಸಾರಿಗೆ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ, ದೇಶದ ವಾಹನೋದ್ಯಮದ ಗಾತ್ರ ₹14 ಲಕ್ಷ ಕೋಟಿಯಷ್ಟಿತ್ತು. ಅದು ಈಗ ₹22 ಲಕ್ಷ ಕೋಟಿಗೆ ಹೆಚ್ಚಳವಾಗಿದೆ’ ಎಂದು ಹೇಳಿದ್ದಾರೆ.
ಪ್ರಸ್ತುತ ಅಮೆರಿಕದ ವಾಹನೋದ್ಯಮದ ಗಾತ್ರ ₹78 ಲಕ್ಷ ಕೋಟಿಯಷ್ಟಿದ್ದು, ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾದ ವಾಹನೋದ್ಯಮದ ಗಾತ್ರವು ₹47 ಲಕ್ಷ ಕೋಟಿಯಷ್ಟಿದ್ದು, ಎರಡನೇ ಸ್ಥಾನದಲ್ಲಿದ್ದರೆ, ಭಾರತ ₹22 ಲಕ್ಷ ಕೋಟಿ ಗಾತ್ರದ ವಾಹನೋದ್ಯಮ ಹೊಂದಿದ್ದು, ಮೂಲಕ ಮೂರನೇ ಸ್ಥಾನದಲ್ಲಿದೆ. ರೈತರು, ಮೆಕ್ಕೆಜೋಳದಿಂದ ಎಥೆನಾಲ್ ತಯಾರಿಸುವ ಮೂಲಕ ₹45 ಸಾವಿರ ಕೋಟಿಗೂ ಹೆಚ್ಚುವರಿ ವರಮಾನ ಗಳಿಸಿದ್ದಾರೆ ಎಂದು ಗಡ್ಕರಿ ತಿಳಿಸಿದ್ದಾರೆ.
ಪಳೆಯುಳಿಕೆ ಇಂಧನ ಬಳಕೆಯಿಂದ ದೇಶಕ್ಕೆ ಆರ್ಥಿಕವಾಗಿ ಹೊರೆಯಾಗುವುದು ಮಾತ್ರವಲ್ಲದೇ, ಇಂಧನ ಆಮದಿಗೆ ವಾರ್ಷಿಕ ₹22 ಲಕ್ಷ ಕೋಟಿ ಖರ್ಚಾಗುತ್ತಿದೆ. ಪರಿಸರಕ್ಕೆ ಈ ಇಂಧನ ಬಳಕೆಯು ಹಾನಿ ಉಂಟು ಮಾಡುತ್ತದೆ ಎಂದಿದ್ದಾರೆ.
2027ರ ವೇಳೆಗೆ ಘನ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸುವ ಗುರಿಯನ್ನು ಹೊಂದಲಾಗಿದೆ ಈ ಮೂಲಕ ಕಸದಿಂದ ರಸ ಸೃಷ್ಟಿಸುತ್ತಿರುವ ಉದ್ದೇಶ ಇದೆ.ನಿತಿನ್ ಗಡ್ಕರಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.