ADVERTISEMENT

ಎಕ್ಸೈಸ್‌ ಸುಂಕ: ಕೋವಿಡ್‌ಗೂ ಮುಂಚಿನ ಮಟ್ಟಕ್ಕಿಂತ ಶೇ 79ರಷ್ಟು ಹೆಚ್ಚು ಸಂಗ್ರಹ

ಪಿಟಿಐ
Published 31 ಅಕ್ಟೋಬರ್ 2021, 14:02 IST
Last Updated 31 ಅಕ್ಟೋಬರ್ 2021, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಎಕ್ಸೈಸ್‌ ಸುಂಕ ಸಂಗ್ರಹವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲ ಆರು ತಿಂಗಳಿನಲ್ಲಿ ಶೇಕಡ 33ರಷ್ಟು ಹೆಚ್ಚಾಗಿದೆ. ಕೋವಿಡ್‌ಗೂ ಮೊದಲಿನ ಮಟ್ಟಕ್ಕಿಂತ ಶೇ 79ರಷ್ಟು ಹೆಚ್ಚಿಗೆ ಎಕ್ಸೈಸ್ ಸುಂಕ ಸಂಗ್ರಹ ಆಗಿದೆ.

ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರಗಳ ಮಹಾನಿಯಂತ್ರಕರ(ಸಿಜಿಎ) ಮಾಹಿತಿಯಪ್ರಕಾರ, 2020ರ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ಎಕ್ಸೈಸ್‌ ಸುಂಕ ಸಂಗ್ರಹವು ₹ 1.28 ಲಕ್ಷ ಕೋಟಿ ಆಗಿತ್ತು. ಇದು 2021ರ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ₹ 1.71 ಲಕ್ಷ ಕೋಟಿಗೆ ಏರಿಕೆ ಆಗಿದೆ.

2019ರ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ಎಕ್ಸೈಸ್‌ ಸುಂಕದಿಂದ ಸಂಗ್ರಹ ಆಗಿದ್ದ ಮೊತ್ತವು ₹ 95,930 ಕೋಟಿ. ಇದಕ್ಕೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ ಶೇ 79ರಷ್ಟು ಹೆಚ್ಚು ಸುಂಕ ಸಂಗ್ರಹ ಆದಂತಾಗಿದೆ.

ADVERTISEMENT

2020–21ನೇ ಹಣಕಾಸು ವರ್ಷದಲ್ಲಿ ಒಟ್ಟು ₹ 3.89 ಲಕ್ಷ ಕೋಟಿ ಎಕ್ಸೈಸ್‌ ಸುಂಕ ಸಂಗ್ರಹ ಆಗಿತ್ತು. ಇದು 2019–20ರಲ್ಲಿ ₹ 2.39 ಲಕ್ಷ ಕೋಟಿಯಷ್ಟು ಇತ್ತು ಎಂದು ಸಿಜಿಎ ಮಾಹಿತಿಯಲ್ಲಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಇ) ವ್ಯವಸ್ಥೆ ಜಾರಿಗೆ ಬಂದ ಬಳಿಕ ಪೆಟ್ರೋಲ್‌, ಡೀಸೆಲ್‌, ವಿಮಾನ ಇಂಧನ ಮತ್ತು ನೈಸರ್ಗಿಕ ಅನಿಲದ ಮೇಲೆ ಮಾತ್ರವೇ ಎಕ್ಸೈಸ್‌ ಸುಂಕ ವಿಧಿಸಲಾಗುತ್ತಿದೆ.

ತೈಲ ಬಾಂಡ್‌ ಮೊತ್ತಕ್ಕಿಂತನಾಲ್ಕು ಪಟ್ಟು ಹೆಚ್ಚು ಸಂಗ್ರಹ: ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳುಗಳಲ್ಲಿ ಹೆಚ್ಚುವರಿಯಾಗಿ ಸಂಗ್ರಹ ಆಗಿರುವ ಎಕ್ಸೈಸ್‌ ಸುಂಕದ ಮೊತ್ತ ₹ 42,931 ಕೋಟಿ. ಇದು, ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ಇಂಧನ ಸಬ್ಸಿಡಿಗಾಗಿ ನೀಡಿದ್ದ ತೈಲ ಬಾಂಡ್‌ಗಳ ಮರುಪಾವತಿಗೆ ಇಡೀ ವರ್ಷಕ್ಕೆ ಬೇಕಿರುವ ₹ ‍10,000 ಕೋಟಿಯ ಮೊತ್ತಕ್ಕಿಂತ ನಾಲ್ಕು ಪಟ್ಟು ಹೆಚ್ಚು.

ಎಕ್ಸೈಸ್ ಸುಂಕದ ಬಹುಪಾಲುಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಧಿಸುವ ಸುಂಕದಿಂದ ಬರುತ್ತದೆ. ಆರ್ಥಿಕತೆಯು ಚೇತರಿಕೆ ಕಾಣುತ್ತಿರುವುದರಿಂದ ಮಾರಾಟವೂ ಹೆಚ್ಚಾಗುತ್ತಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಸುಂಕದಿಂದ ಹೆಚ್ಚುವರಿಯಾಗಿ ₹ 1 ಲಕ್ಷ ಕೋಟಿ ಸಂಗ್ರಹ ಆಗಬಹುದು ಎಂದು ಉದ್ಯಮದ ಮೂಲಗಳು ಹೇಳಿವೆ.

ಎಲ್‌ಪಿಜಿ, ಸೀಮೆಎಣ್ಣೆ ಹಾಗೂ ಡೀಸೆಲ್‌ಅನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲು, ಯುಪಿಎ ಸರ್ಕಾರವು ಒಟ್ಟು ₹ 1.34 ಲಕ್ಷ ಕೋಟಿ ಮೌಲ್ಯದ ತೈಲ ಬಾಂಡ್‌ ಅನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ನೀಡಿದೆ. ಈ ಮೊತ್ತದಲ್ಲಿ ₹ 10 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರವು ಕಂಪನಿಗಳಿಗೆ ಈ ವರ್ಷ ಪಾವತಿಸಬೇಕಿದೆ.

ದೇಶಿ ಮಾರುಕಟ್ಟೆಯಲ್ಲಿ ಇಂಧನ ದರವು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಹೀಗಿದ್ದರೂ ಅವುಗಳ ದರ ಕಡಿಮೆ ಮಾಡಿ ಜನಸಾಮಾನ್ಯರ ಮೇಲಿನ ಹೊರೆಯನ್ನು ತಗ್ಗಿಸಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ತೈಲ ಬಾಂಡ್‌ಗಳು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಇಂಧನ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಅಂಕಿ–ಅಂಶ

₹ 42,931 ಕೋಟಿ

ಏಪ್ರಿಲ್‌–ಸೆಪ್ಟೆಂಬರ್‌ನಲ್ಲಿ ಎಕ್ಸೈಸ್‌ ಸುಂಕದಿಂದ ಸಂಗ್ರಹ ಆಗಿರುವ ಹೆಚ್ಚುವರಿ ಮೊತ್ತ

₹ 10 ಸಾವಿರ ಕೋಟಿ

ಈ ವರ್ಷ ತೈಲ ಬಾಂಡ್‌ಗೆ ಪ್ರತಿಯಾಗಿ ಸರ್ಕಾರ ಪಾವತಿಸಬೇಕಿರುವ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.