ADVERTISEMENT

ಸ್ಯಾಮ್ಸಂಗ್‌ಗೆ ₹5,150 ಕೋಟಿ ತೆರಿಗೆ ಬಿಸಿ

ಸುಂಕ ಪಾವತಿಗೆ ನುಣುಚಿಕೊಂಡ ಆರೋಪ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 14:10 IST
Last Updated 25 ಮಾರ್ಚ್ 2025, 14:10 IST
ಸ್ಯಾಮ್ಸಂಗ್‌
ಸ್ಯಾಮ್ಸಂಗ್‌   

ನವದೆಹಲಿ: ಟೆಲಿಕಾಂ ಉಪಕರಣಗಳ ಆಮದು ವೇಳೆ ಸುಂಕ ಪಾವತಿಗೆ ನುಣುಚಿಕೊಂಡಿದ್ದ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಇಂಡಿಯಾ ಕಂಪನಿಗೆ, ₹5,150 ಕೋಟಿ ತೆರಿಗೆ ಪಾವತಿಸುವಂತೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ.

ಇತ್ತೀಚಿನ ವರ್ಷಗಳಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಅತಿಹೆಚ್ಚು ಮೊತ್ತದ ತೆರಿಗೆ ಬಾಕಿ ಪಾವತಿಸುವಂತೆ ಆದೇಶಿಸಿರುವ ಪ್ರಕರಣ ಇದಾಗಿದೆ.

2018ರಿಂದ 2021ರ ನಡುವೆ ಈ ಕಂಪನಿಯು ಪ್ರಮುಖ ಉಪಕರಣಗಳನ್ನು ಆಮದು ಮಾಡಿಕೊಂಡ ವೇಳೆ ಕೇಂದ್ರ ಸರ್ಕಾರಕ್ಕೆ ನಿಗದಿತ ಸುಂಕ ‍‍‍ಪಾವತಿಸದೆ ತ‍ಪ್ಪಿಸಿಕೊಂಡಿತ್ತು. ಹಾಗಾಗಿ, ಸರ್ಕಾರ ಈ ಕ್ರಮಕೈಗೊಂಡಿದೆ ಎಂದು ಹೇಳಲಾಗಿದೆ.

ADVERTISEMENT

ಸ್ಯಾಮ್ಸಂಗ್‌ ಕಂಪನಿಯು ಒಟ್ಟು ₹4,455 ಕೋಟಿ ಪಾವತಿಸಬೇಕಿದೆ. ಇದರಲ್ಲಿ ತೆರಿಗೆ ಮತ್ತು ದಂಡದ ಮೊತ್ತ ಒಳಗೊಂಡಿದೆ. ಕಂಪನಿಯ ಏಳು ಅಧಿಕಾರಿಗಳಿಗೆ ₹694 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. 

‌ಸ್ಯಾಮ್ಸಂಗ್‌ ಕಂಪನಿಯು ಭಾರತದಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಸ್ಮಾರ್ಟ್‌ಫೋನ್‌ ಮಾರಾಟ ಮಾಡುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಮೊಬೈಲ್‌ ಟವರ್‌ಗಳಿಗೆ ಅಗತ್ಯವಿರುವ ಉಪಕರಣಗಳನ್ನೂ ಮಾರಾಟ ಮಾಡುತ್ತದೆ. ಕಳೆದ ವರ್ಷ ಕಂಪನಿಯು ₹8,185 ಕೋಟಿ ನಿವ್ವಳ ಲಾಭ ಗಳಿಸಿತ್ತು. 

ದೂರಸಂಪರ್ಕ ಉಪಕರಣಗಳ ಆಮದಿನಲ್ಲಿ ಶೇ 10 ಅಥವಾ ಶೇ 20ರಷ್ಟು ಸುಂಕ ಪಾವತಿಸದೆ ನುಣುಚಿಕೊಂಡಿದೆ. ಆಮದು ಮಾಡಿಕೊಂಡ ಉಪಕರಣಗಳನ್ನು ರಿಲಯನ್ಸ್ ಜಿಯೊಗೆ ಮಾರಾಟ ಮಾಡಿದೆ ಎಂದು ಹೇಳಲಾಗಿದೆ. 

‘ಸ್ಯಾಮ್ಸಂಗ್‌ ಭಾರತದ ಕಾನೂನುಗಳನ್ನು ಉಲ್ಲಂಘಿಸಿದೆ. ಉದ್ದೇಶಪೂರ್ವಕವಾಗಿ ಕಸ್ಟಮ್ಸ್‌ ಇಲಾಖೆಗೆ ಸುಳ್ಳು ದಾಖಲೆ ಸಲ್ಲಿಸಿದೆ’ ಎಂದು ಕಸ್ಟಮ್ಸ್‌ ವಿಭಾಗದ ಆಯುಕ್ತ ಸೋನಾಲ್‌ ಬಜಾಜ್ ಹೇಳಿದ್ದಾರೆ.

‘ಆಮದು ಮಾಡಿಕೊಂಡಿರುವ ಉಪಕರಣಗಳಿಗೆ ಸುಂಕ ಅನ್ವಯವಾಗುವುದಿಲ್ಲ. ಸರ್ಕಾರದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು’ ಎಂದು ಕಂಪನಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.