ADVERTISEMENT

ಭಾರತದ ಮೇಲೆ ಅಮೆರಿಕ ಸುಂಕ ಪ್ರಹಾರ: ಸರ್ಕಾರದ ನೆರವು ಕೇಳಿದ ರಫ್ತುದಾರರು

ಪಿಟಿಐ
Published 3 ಆಗಸ್ಟ್ 2025, 14:22 IST
Last Updated 3 ಆಗಸ್ಟ್ 2025, 14:22 IST
ಪೀಯೂಷ್ ಗೋಯಲ್ –ಪಿಟಿಐ ಚಿತ್ರ
ಪೀಯೂಷ್ ಗೋಯಲ್ –ಪಿಟಿಐ ಚಿತ್ರ   

ನವದೆಹಲಿ: ಭಾರತದ ಸರಕುಗಳ ಮೇಲೆ ಅಮೆರಿಕ ಹೇರಿರುವ ಶೇಕಡ 25ರಷ್ಟು ಸುಂಕದ ಹೊರೆಯನ್ನು ನಿಭಾಯಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು, ಹಣಕಾಸಿನ ನೆರವು ಒದಗಿಸಬೇಕು ಎಂದು ಆಹಾರ ಉತ್ಪನ್ನಗಳು, ಸಮುದ್ರ ಉತ್ಪನ್ನಗಳು, ಜವಳಿ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ತೊಡಗಿರುವವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರ ಜೊತೆ ಮುಂಬೈನಲ್ಲಿ ನಡೆದ ಸಭೆಯಲ್ಲಿ ಈ ವಲಯಗಳ ಕೆಲವು ಪ್ರತಿನಿಧಿಗಳು ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಮಾದರಿಯಲ್ಲಿ ತಮಗೂ ನೆರವು ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

ರಫ್ತು ವಹಿವಾಟಿನಲ್ಲಿ ತೊಡಗಿರುವವರು ತಮ್ಮ ಸಲಹೆಗಳನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಸಚಿವರು ಸಲಹೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭಾರತದಲ್ಲಿ ಸಾಲದ ಮೇಲಿನ ಬಡ್ಡಿ ದರವು ಶೇ 8ರಿಂದ ಶೇ 12ರವರೆಗೆ ಇದೆ. ಕೆಲವು ಸಂದರ್ಭಗಳಲ್ಲಿ ಇದು ಇನ್ನೂ ಹೆಚ್ಚಿರುವುದೂ ಇದೆ. ಆದರೆ ಭಾರತಕ್ಕೆ ಅಮೆರಿಕದ ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡುತ್ತಿರುವ ಚೀನಾ, ಮಲೇಷ್ಯಾ, ಥಾಯ್ಲೆಂಡ್, ವಿಯೆಟ್ನಾಂ ದೇಶಗಳಲ್ಲಿ ಬಡ್ಡಿ ದರವು ಕಡಿಮೆ ಇದೆ ಎಂದು ರಫ್ತುದಾರರು ಹೇಳಿದ್ದಾರೆ.

ವಸ್ತ್ರ ಹಾಗೂ ಸೀಗಡಿ ರಫ್ತುದಾರರ ಪರಿಸ್ಥಿತಿ ಚೆನ್ನಾಗಿಲ್ಲ. ಅಮೆರಿಕದ ಗ್ರಾಹಕರು ಖರೀದಿಯನ್ನು ರದ್ದುಗೊಳಿಸಲು ಶುರುಮಾಡಿದ್ದಾರೆ, ಇನ್ನು ಕೆಲವರು ಖರೀದಿಯನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಸಮಸ್ಯೆ ಸೃಷ್ಟಿಸಲಿದೆ. ಉದ್ಯೋಗ ನಷ್ಟವೂ ಆಗಬಹುದು ಎಂದು ರಫ್ತುದಾರರು ವಿವರಿಸಿದ್ದಾರೆ ಎಂದು ಅಧಿಕಾರಿ ವರ್ಗದ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.