ನವದೆಹಲಿ / ಕೋಲ್ಕತ್ತ: ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ) 24 ದೇಶಗಳಿಗೆ ದೇಶದ ರಫ್ತು ಏರಿಕೆ ಕಂಡಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಇದೇ ಅವಧಿಯಲ್ಲಿ ಹೆಚ್ಚಿನ ಸುಂಕದಿಂದಾಗಿ ಅಮೆರಿಕಕ್ಕೆ ರಫ್ತು ಪ್ರಮಾಣ ಇಳಿಕೆಯಾಗಿದೆ. ಕೊರಿಯಾ, ಯುಎಇ, ಜರ್ಮನಿ, ಈಜಿಪ್ಟ್, ವಿಯೆಟ್ನಾಂ, ಇರಾಕ್, ಮೆಕ್ಸಿಕೊ, ರಷ್ಯಾ, ಕೆನ್ಯಾ, ನೈಜೀರಿಯಾ, ಕೆನಡಾ ಸೇರಿದಂತೆ 24 ರಾಷ್ಟ್ರಗಳಿಗೆ ದೇಶದಿಂದ ಆಗುವ ರಫ್ತು ಹೆಚ್ಚಾಗಿದೆ.
ಭಾರತವು ತನ್ನ ಸರಕುಗಳನ್ನು ಬೇರೆ ಬೇರೆ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಆದ್ಯತೆ ನೀಡುತ್ತಿರುವುದನ್ನು ಇದು ತೋರಿಸುತ್ತಿದೆ.
ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಒಟ್ಟು ರಫ್ತಿನಲ್ಲಿ ಶೇ 3.02ರಷ್ಟು ಹೆಚ್ಚಳವಾಗಿದ್ದು, ₹19.35 ಲಕ್ಷ ಕೋಟಿಯಷ್ಟಾಗಿದೆ. ದೇಶದ ಆಮದು ಶೇ 4.53ರಷ್ಟು ಏರಿಕೆಯಾಗಿದ್ದು, ₹33 ಲಕ್ಷ ಕೋಟಿಯಷ್ಟಾಗಿದೆ. ವ್ಯಾಪಾರ ಕೊರತೆ ₹13.63 ಲಕ್ಷ ಕೋಟಿಯಾಗಿದೆ.
ಇದೇ ಅವಧಿಯಲ್ಲಿ ಈ 24 ದೇಶಗಳಿಗೆ ₹11.37 ಲಕ್ಷ ಕೋಟಿ ಮೌಲ್ಯದಷ್ಟು ರಫ್ತು ವಹಿವಾಟು ದೇಶದಿಂದ ನಡೆದಿದೆ. ಇದು ದೇಶದ ಒಟ್ಟು ರಫ್ತಿನಲ್ಲಿ ಶೇ 59ರಷ್ಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 16 ದೇಶಗಳಿಗೆ ದೇಶದ ರಫ್ತು ಪ್ರಮಾಣ ಇಳಿಕೆಯಾಗಿದೆ. ಈ ದೇಶಗಳು ದೇಶದ ಒಟ್ಟು ರಫ್ತಿನಲ್ಲಿ ಶೇ 27ರಷ್ಟು ಪಾಲು ಹೊಂದಿವೆ.
ಅಮೆರಿಕವು ಭಾರತದಿಂದ ಆಮದಾಗುವ ಸರಕುಗಳ ಮೇಲೆ ವಿಧಿಸಿರುವ ಶೇ 50ರಷ್ಟು ಸುಂಕವು, ಅಮೆರಿಕಕ್ಕೆ ರಫ್ತು ಮಾಡಲು ತೊಂದರೆ ಉಂಟು ಮಾಡಿದೆ. ಆದರೆ, ರಫ್ತುದಾರರು ಆಫ್ರಿಕಾ, ಲ್ಯಾಟಿನ್ ಅಮೆರಿಕ, ಪಶ್ಚಿಮ ಏಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲೂ ಈ ರಫ್ತು ಹೆಚ್ಚಳವಾಗಲಿದೆ ಎಂದು ರಫ್ತುದಾರರೊಬ್ಬರು ಹೇಳಿದ್ದಾರೆ.
ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಅಮೆರಿಕಕ್ಕೆ ದೇಶದ ರಫ್ತು ಶೇ 13.37ರಷ್ಟು ಹೆಚ್ಚಳವಾಗಿದೆ. ಇದು ರೂಪಾಯಿ ಮೌಲ್ಯದಲ್ಲಿ ₹4 ಲಕ್ಷ ಕೋಟಿಯಷ್ಟಾಗಿದೆ. ಆಮದು ಶೇ 9ರಷ್ಟು ಏರಿಕೆಯಾಗಿದ್ದು, ₹2.25 ಲಕ್ಷ ಕೋಟಿ ಆಗಿದೆ.
2024–25ರ ಆರ್ಥಿಕ ವರ್ಷದಲ್ಲಿ ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
ಅಮೆರಿಕಕ್ಕೆ ರಫ್ತು ಇಳಿಕೆ
ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕಕ್ಕೆ ದೇಶದ ಸರಕುಗಳ ರಫ್ತು ಇಳಿಕೆ ಆಗಿದೆ. ಇದೇ ಅವಧಿಯಲ್ಲಿ ಅಮೆರಿಕ ಹೊರತುಪಡಿಸಿ ಬೇರೆ ದೇಶಗಳಿಗೆ ರಫ್ತು ಹೆಚ್ಚಳವಾಗಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ವರದಿ ಹೇಳಿದೆ.
ಆಗಸ್ಟ್ ತಿಂಗಳಿನಲ್ಲಿ ಅಮೆರಿಕಕ್ಕೆ ದೇಶದಿಂದ ರಫ್ತಾದ ಸರಕುಗಳಲ್ಲಿ ಶೇ 7ರಷ್ಟು ಬೆಳವಣಿಗೆ ಆಗಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ರಫ್ತು ಪ್ರಮಾಣ ಶೇ 11.9ರಷ್ಟು ಇಳಿಕೆಯಾಗಿದೆ. ಇದು ಹಣಕಾಸಿನ ಮೌಲ್ಯದಲ್ಲಿ ₹48372 ಕೋಟಿಯಷ್ಟಾಗಿದೆ. ಇದೇ ಅವಧಿಯಲ್ಲಿ ಅಮೆರಿಕ ಹೊರತುಪಡಿಸಿ ಬೇರೆ ದೇಶಗಳಿಗೆ ಭಾರತದಿಂದಾದ ಸರಕುಗಳ ರಫ್ತು ಶೇ 10.9ರಷ್ಟು ಹೆಚ್ಚಳವಾಗಿದೆ. ಆಗಸ್ಟ್‌ನಲ್ಲಿ ರಫ್ತು ಶೇ 6.6ರಷ್ಟು ಮಾತ್ರ ಇತ್ತು. ಅಮೆರಿಕದ ಹೆಚ್ಚುವರಿ ಸುಂಕವು ದೇಶದ ಸರಕುಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.