ADVERTISEMENT

ಆರು ತಿಂಗಳ ಬಳಿಕ ರಫ್ತು ಚೇತರಿಕೆ

ಪಿಟಿಐ
Published 3 ಅಕ್ಟೋಬರ್ 2020, 14:20 IST
Last Updated 3 ಅಕ್ಟೋಬರ್ 2020, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸತತ ಆರು ತಿಂಗಳಿನಿಂದ ಇಳಿಮುಖವಾಗಿದ್ದ ದೇಶದ ರಫ್ತು ವಹಿವಾಟು ಸೆಪ್ಟೆಂಬರ್‌ನಲ್ಲಿ ಶೇ 5.27ರಷ್ಟು ಏರಿಕೆ ಕಂಡಿದ್ದು, ₹ 1.97 ಲಕ್ಷ ಕೋಟಿಗೆ ತಲುಪಿದೆ.

ಕೋವಿಡ್‌–19 ಬಿಕ್ಕಟ್ಟು ಮತ್ತು ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆ ಆಗಿದ್ದರಿಂದ ಮಾರ್ಚ್‌ನಿಂದಲೂ ರಫ್ತು ವಹಿವಾಟು ನಕಾರಾತ್ಮಕ ಬೆಳವಣಿಗೆ ಕಾಣುತ್ತಿತ್ತು.

2019ರ ಸೆಪ್ಟೆಂಬರ್‌ನಲ್ಲಿ ₹ 1.89 ಲಕ್ಷ ಕೋಟಿ ಮೌಲ್ಯದ ಸರಕುಗಳು ರಫ್ತಾಗಿದ್ದವು.

ADVERTISEMENT

ಆಮದು ವಹಿವಾಟು ಶೇ 19.6ರಷ್ಟು ಇಳಿಕೆಯಾಗಿದ್ದು, ₹ 2.19 ಲಕ್ಷ ಕೋಟಿಗಳಷ್ಟಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.

ವ್ಯಾಪಾರ ಕೊರತೆಯು 2019ರ ಸೆಪ್ಟೆಂಬರ್‌ನಲ್ಲಿ ₹ 84,680 ಕೋಟಿ ಇತ್ತು. ಇದು 2020ರ ಸೆಪ್ಟೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ₹ 21,243 ಕೋಟಿಗಳಿಗೆ ಇಳಿಕೆಯಾಗಿದೆ.

ಕಚ್ಚಾ ತೈಲ ಆಮದು ಶೇ 36ರಷ್ಟು, ಚಿನ್ನದ ಆಮದು ಶೇ 53ರಷ್ಟು ಇಳಿಕೆಯಾಗಿದೆ.

ಏಪ್ರಿಲ್‌–ಸೆಪ್ಟೆಂಬರ್ ಅವಧಿಯಲ್ಲಿನ ರಫ್ತು ವಹಿವಾಟು ಶೇ 21ರಷ್ಟು ಇಳಿಕೆ ಆಗಿದ್ದರೆ ಆಮದು ವಹಿವಾಟು ಶೇ 40ರಷ್ಟು ನಕಾರಾತ್ಮಕ ಬೆಳವಣಿಗೆ ಕಂಡಿದೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಹಂತ ಹಂತವಾಗಿ ತೆಗೆಯುತ್ತಿರುವುದರಿಂದ ವಾಣಿಜ್ಯ ವಹಿವಾಟು ಸುಧಾರಿಸಿಕೊಂಡಿದೆ. ಇದರಿಂದಾಗಿ ರಫ್ತು ವಹಿವಾಟು ಸಹ 2020–21ರಲ್ಲಿ ಮೊದಲ ಬಾರಿಗೆ ಚೇತರಿಕೆ ಕಂಡಿದೆ ಎಂದುಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಶರದ್‌ ಕುಮಾರ್‌ ಸರಫ್‌ ಹೇಳಿದ್ದಾರೆ.

ಜಗತ್ತಿನಾದ್ಯಂತ ಚೀನಾ ವಿರೋಧಿ ಭಾವನೆಗಳು ವ್ಯಕ್ತವಾಗುತ್ತಿರುವುದು ಸಹ ರಫ್ತು ವಹಿವಾಟು ಸುಧಾರಿಸಲು ಒಂದು ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ವಾಣಿಜ್ಯ ವಹಿವಾಟುಗಳು ಸಹಜ ಸ್ಥಿತಿಗೆ ಮರಳಲು ಆರಂಭಿಸಿರುವುದರಿಂದ ಉತ್ಪನ್ನಗಳಿಗೆ ಬೇಡಿಕೆ ಬರಲಾರಂಭಿಸಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.