ADVERTISEMENT

ಟ್ರ್ಯಾಕ್ಟರ್‌ ಮಾರಾಟ ಹೆಚ್ಚಿಸಲಿರುವ ಕೃಷಿ ವರಮಾನ: ಕ್ರಿಸಿಲ್‌

ಪಿಟಿಐ
Published 11 ನವೆಂಬರ್ 2020, 11:32 IST
Last Updated 11 ನವೆಂಬರ್ 2020, 11:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ಕೋವಿಡ್‌–19 ಸಾಂಕ್ರಾಮಿಕವು ಕೃಷಿ ಚಟುವಟಿಕೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಹೀಗಾಗಿ ಈ ಬಾರಿ ಕೃಷಿ ವರಮಾನ ಹೆಚ್ಚಾಗುವ ನಿರೀಕ್ಷೆ ಮಾಡಲಾಗಿದೆ. ಅದರಿಂದಾಗಿ ಟ್ರ್ಯಾಕ್ಟರ್‌ ಮಾರಾಟದಲ್ಲಿಯೂ ಏರಿಕೆ ಕಂಡುಬರಲಿದೆ’ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಅಭಿಪ್ರಾಯಪಟ್ಟಿದೆ.

ಟ್ರ್ಯಾಕ್ಟರ್‌ ಮಾರಾಟವು ಶೇಕಡ 1ರಷ್ಟು ಕುಸಿತ ಕಾಣಲಿದೆ ಎಂದು ಈ ಹಿಂದೆ ಅದು ಅಂದಾಜು ಮಾಡಿತ್ತು. ಆದರೆ, ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ನಿರೀಕ್ಷೆಗಿಂತಲೂ ವೇಗವಾಗಿ ಚೇತರಿಕೆ ಕಾಣಲಿದ್ದು, ಶೇ 10–12ರಷ್ಟು ಪ್ರಗತಿ ಸಾಧ್ಯವಾಗಲಿದೆ ಎಂದು ತಿಳಿಸಿದೆ.

ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಮುಂಗಾರು ಬಿತ್ತನೆ ಗರಿಷ್ಠ ಮಟ್ಟದಲ್ಲಿದ್ದು, ಮುಂಗಾರು ಉತ್ತಮವಾಗಿದೆ. ಇದರಿಂದಾಗಿ ಕೃಷಿ ವರಮಾನ ಹೆಚ್ಚಾಗಲಿದೆ ಎಂದು ಹೇಳಿದೆ.

ADVERTISEMENT

ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ಟ್ರ್ಯಾಕ್ಟರ್‌ ಉದ್ದಿಮೆಯು ಶೇ 12ರಷ್ಟು ಪ್ರಗತಿ ಸಾಧಿಸಿದೆ. ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಕ್ರಮವಾಗಿ ಶೇ 45 ಮತ್ತು ಶೇ 13ರಷ್ಟು ಬೇಡಿಕೆ ಬಂದಿತ್ತು.

ಹಣಕಾಸು ವರ್ಷದ ಮೊದಲ ಆರು ತಿಂಗಳಿನಲ್ಲಿ ಕೃಷಿ ವಲಯದ ಮೇಲೆ ಸರ್ಕಾರದ ವೆಚ್ಚವು ಹೆಚ್ಚಾಗಿದೆ. 2020–21ನೇ ಮಾರುಕಟ್ಟೆ ವರ್ಷಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನೂ ಹೆಚ್ಚಿಸಲಾಗಿದೆ. ಈ ಅಂಶಗಳು ಸಹ ಕೃಷಿ ವರಮಾನದ ಏರಿಕೆಗೆ ಕಾರಣವಾಗಲಿವೆ. ಈ ಮೂಲಕ ಟ್ರ್ಯಾಕ್ಟರ್‌ ಮಾರಾಟ ಹೆಚ್ಚಾಗಲಿದೆ ಎಂದು ಕ್ರಿಸಿಲ್‌ನ ನಿರ್ದೇಶಕ ಗೌತಮ್‌ ಶಾಹಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.