ADVERTISEMENT

ಭಾರತಕ್ಕೆ ರಸಗೊಬ್ಬರ: ಮುಂಚೂಣಿಗೆ ರಷ್ಯಾ

ಜಾಗತಿಕ ಮಾರುಕಟ್ಟೆ ದರಕ್ಕಿಂತಲೂ ಕಡಿಮೆಗೆ ಭಾರತಕ್ಕೆ ಪೂರೈಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 19:30 IST
Last Updated 21 ನವೆಂಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ (ರಾಯಿಟರ್ಸ್‌): ಭಾರತಕ್ಕೆ ರಸಗೊಬ್ಬರ ಪೂರೈಸುವ ದೇಶಗಳ ಸಾಲಿನಲ್ಲಿ ರಷ್ಯಾವು ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಸರ್ಕಾರ ಮತ್ತು ಉದ್ಯಮ ವಲಯದ ಮೂಲಗಳು ಹೇಳಿವೆ. ಜಾಗತಿಕ ಮಾರುಕಟ್ಟೆ ದರಕ್ಕಿಂತಲೂ ಕಡಿಮೆಗೆ ರಷ್ಯಾದ ಪೂರೈಕೆದಾರರು ಭಾರತಕ್ಕೆ ರಸಗೊಬ್ಬರ ಮಾರಾಟ ಮಾಡಿದ್ದಾರೆ.

2022–23ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತವು ರಷ್ಯಾದಿಂದ 21.5 ಲಕ್ಷ ಟನ್‌ ರಸಗೊಬ್ಬರ ಆಮದು ಮಾಡಿಕೊಂಡಿದೆ. 2021–22ರ ಒಟ್ಟು ಹಣಕಾಸು ವರ್ಷಕ್ಕೆ ಹೋಲಿಸಿದರೆ ಆಮದಿನಲ್ಲಿ ಶೇಕಡ 371ರಷ್ಟು ಏರಿಕೆ ಕಂಡುಬಂದಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂದಿನ ಹಣಕಾಸು ವರ್ಷದಲ್ಲಿ ಭಾರತವು 12.6 ಲಕ್ಷ ಟನ್‌ ರಸಗೊಬ್ಬರವನ್ನು ರಷ್ಯಾದಿಂದ ಆಮದು ಮಾಡಿಕೊಂಡಿತ್ತು. ಮೌಲ್ಯದ ಲೆಕ್ಕದಲ್ಲಿ ಶೇ 765ರಷ್ಟು ಹೆಚ್ಚಾಗಿದ್ದು, ₹ 10,309 ಕೋಟಿಗೆ ತಲುಪಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ರಷ್ಯಾ–ಉಕ್ರೇನ್‌ ಸಮರ ಆರಂಭವಾದ ಬಳಿಕ ಭಾರತವು ನ್ಯಾಯಸಮ್ಮತ ಬೆಲೆಗೆ ರಸಗೊಬ್ಬರ ಖರೀದಿಸಲು ಕಷ್ಟಪಡುವಂತಾಯಿತು. ಈ ಸಂದರ್ಭದಲ್ಲಿ ರಷ್ಯಾದ ಪೂರೈಕೆದಾರರು ನ್ಯಾಯಸಮ್ಮತ ಬೆಲೆಗೆ ರಸಗೊಬ್ಬರ ಪೂರೈಕೆ ಮಾಡಲು ಆರಂಭಿಸಿದರು. ಇದು ಸಂಭಾವ್ಯ ಕೊರತೆ ತಪ್ಪಿಸಲು ಭಾರತಕ್ಕೆ ನೆರವಾಯಿತು ಎಂದು ಅವರು ಹೇಳಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ದೇಶವು ಸಮರ ಸಾರಿದ್ದರಿಂದಾಗಿ ‌ರಷ್ಯಾ ಮತ್ತು ಬೆಲಾರುಸ್‌ನಿಂದ ರಸಗೊಬ್ಬರ ಆಮದು ಮಾಡಿಕೊಳ್ಳುವುದಕ್ಕೆ ಪಾಶ್ಚಾತ್ಯ ದೇಶಗಳು ನಿರ್ಬಂಧ ಹೇರಿದವು. ಆ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆ ಹೆಚ್ಚಾಯಿತು.

ಭಾರತವು ಕೆಲವೊಮ್ಮೆ ಪ್ರತಿ ಟನ್‌ಗೆ ಜಾಗತಿಕ ಬೆಲೆಗಿಂತ 70 ಡಾಲರ್‌ಗೂ ಹೆಚ್ಚಿನ ರಿಯಾಯಿತಿಗೆ ರಸಗೊಬ್ಬರ ಪಡೆದುಕೊಳ್ಳುತ್ತಿದೆ. ರಷ್ಯಾ ದೇಶವು ಅತಿದೊಡ್ಡ ಖರೀದಿದಾರ ದೇಶವನ್ನು (ಭಾರತ) ಪಡೆದುಕೊಂಡಿದ್ದು, ಅದು ಯುರೋಪ್‌ನ ಖರೀದಿದಾರರ ಸ್ಥಾನವನ್ನು ತುಂಬಬಲ್ಲದು ಎಂದು ಉದ್ಯಮ ವಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತವು ಜೂನ್‌ನಲ್ಲಿ ಪ್ರತಿ ಟನ್‌ ಡಿಎಪಿಯನ್ನು 920–925 ಡಾಲರ್‌ಗೆ ರಷ್ಯಾದಿಂದ ಖರೀದಿಸಿದೆ. ಇದೇ ವೇಳೆ ಏಷ್ಯಾದ ಇತರ ದೇಶಗಳು ಪ್ರತಿ ಟನ್‌ಗೆ 1 ಸಾವಿರ ಡಾಲರ್‌ಗೂ ಹೆಚ್ಚಿನ ಬೆಲೆ ಪಾವತಿಸಿವೆ ಎಂದು ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.

ಭಾರತವು 2021–22ರಲ್ಲಿ ಆಮದು ಮಾಡಿಕೊಂಡ ರಸಗೊಬ್ಬರದಲ್ಲಿ ರಷ್ಯಾದ ಪಾಲು ಶೇ 6ರಷ್ಟು ಇದ್ದರೆ ಚೀನಾ ಶೇ 24ರಷ್ಟು ಪಾಲು ಹೊಂದಿ, ಮೊದಲ ಸ್ಥಾನದಲ್ಲಿತ್ತು. 2022–23ರ ಮೊದಲಾರ್ಧದಲ್ಲಿಯೇ ರಷ್ಯಾದ ರಫ್ತು ಪ್ರಮಾಣವು ಶೇ 21ಕ್ಕೆ ಏರಿಕೆ ಆಗಿದ್ದು, ಚೀನಾವನ್ನು ಹಿಂದಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.