ADVERTISEMENT

ಎಫ್‌ಐಐ: ವಾರದಲ್ಲಿ ₹ 14,106 ಕೋಟಿ ಹಿಂತೆಗೆತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 19:31 IST
Last Updated 4 ಫೆಬ್ರುವರಿ 2023, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರತದ ಷೇರುಪೇಟೆಯಿಂದ ಬಂಡವಾಳ ಹಿಂದಕ್ಕೆ ಪಡೆಯುವುದನ್ನು ಮುಂದುವರಿಸಿದ್ದಾರೆ. ಶುಕ್ರವಾರಕ್ಕೆ ಕೊನೆಗೊಂಡ ವಾರದಲ್ಲಿ ₹ 14,106 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇದರಿಂದಾಗಿ ಜನವರಿ 2 ರಿಂದ ಫೆಬ್ರುವರಿ 3ರವರೆಗೆ ನಡೆದಿರುವ ವಹಿವಾಟಿನಲ್ಲಿ ಒಟ್ಟಾರೆ ₹43,338 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದಂತಾಗಿದೆ.

‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಮಾರುಕಟ್ಟೆಯಲ್ಲಿ ಲಾಭ ಗಳಿಸಿಕೊಂಡು ಆ ಮೊತ್ತವನ್ನು ಮಾರುಕಟ್ಟೆ ಬಂಡವಾಳ ಮೌಲ್ಯ ಕಡಿಮೆ ಇರುವ ದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಭಾರತದ ಷೇರುಪೇಟೆಯು ಈ ವರ್ಷದಲ್ಲಿ ಈವರೆಗಿನ ವಹಿವಾಟಿನಲ್ಲಿ ಶೇ 1.89ರಷ್ಟು ಇಳಿಕೆ ಕಂಡಿದೆ. ಇದೇ ಅವಧಿಯಲ್ಲಿ ಚೀನಾದ ಮಾರುಕಟ್ಟೆ ಶೇ 4.71, ಹಾಂಗ್‌ಕಾಂಗ್‌ ಶೇ 7.52 ಮತ್ತು ದಕ್ಷಿಣ ಕೊರಿಯಾ ಷೇರುಪೇಟೆ ಶೇ11.45ರಷ್ಟು ಗಳಿಕೆ ಕಂಡುಕೊಂಡಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸಾಲಪತ್ರ ಮಾರುಕಟ್ಟೆ ಮೇಲೆಯೂ ಬಂಡವಾಳ ತೊಡಗಿಸಲು ವಿದೇಶಿ ಹೂಡಿಕೆದಾರರು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ’ ಎಂದು ಹೇಳಿದರು.

‘ಈ ಬಾರಿಯ ಕೇಂದ್ರ ಬಜೆಟ್‌ ಮಾರುಕಟ್ಟೆಯ ಪಾಲಿಗೆ ನಿರೀಕ್ಷೆಗಿಂತಲೂ ಉತ್ತಮವಾಗಿತ್ತು. ಆದರೆ, ಅದಾನಿ ಸಮೂಹ ಕಂಪನಿಗಳ ಷೇರು ಕುಸಿತದಿಂದಾಗಿ ಮಾರುಕಟ್ಟೆಗೆ ಗಳಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಮೂಹದ ಕಂಪನಿಗಳಿಗೆ ಸಾಲ ನೀಡಿರುವ ಬ್ಯಾಂಕ್‌ಗಳ ಷೇರುಗಳ ಮೌಲ್ಯ ಇಳಿಕೆ ಕಾಣುವಂತಾಯಿತು. ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯು ಸ್ಥಿರವಾಗಿದೆ ಎನ್ನುವ ಆರ್‌ಬಿಐನ ಹೇಳಿಕೆಯು ಬ್ಯಾಂಕಿಂಗ್ ಷೇರುಗಳಲ್ಲಿ ತುಸು ಚೇತರಿಕೆಗೆ ನೆರವಾಯಿತು’ ಎಂದು ವಿಜಯಕುಮಾರ್‌ ತಿಳಿಸಿದರು.

ದೇಶಿ ಸಾಂಸ್ಥಿಕ ಹೂಡಿಕೆದರರು ಜನವರಿ 2 ರಿಂದ ಫೆಬ್ರುವರಿ 3ರವರೆಗಿನ ವಹಿವಾಟಿನಲ್ಲಿ ₹37,490 ಕೋಟಿಗೂ ಅಧಿಕ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.