ADVERTISEMENT

ತೆರಿಗೆ ಪ್ರಸ್ತಾವ; ನಿರ್ಮಲಾ ಸಮರ್ಥನೆ

ಲೋಕಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ

ಪಿಟಿಐ
Published 18 ಜುಲೈ 2019, 17:25 IST
Last Updated 18 ಜುಲೈ 2019, 17:25 IST
ನಿರ್ಮಲಾ
ನಿರ್ಮಲಾ   

ನವದೆಹಲಿ: ‘ಹಣಕಾಸು ಮಸೂದೆ 2019ರಲ್ಲಿನ ತೆರಿಗೆ ಪ್ರಸ್ತಾವಗಳು ನಾಗರಿಕರ ಮೇಲಿನ ಹೊರೆ ತಗ್ಗಿಸಲಿದ್ದು, ಜೀವನಮಟ್ಟ ಸುಧಾರಣೆಗೆ ನೆರವಾಗಲಿವೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ನಡೆದ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ಅವರು, ಬಜೆಟ್‌ ಪ್ರಸ್ತಾವಗಳು ‘ಭಾರತದಲ್ಲಿಯೇ ತಯಾರಿಸಿ’ ಮತ್ತು ಡಿಜಿಟಲ್ ಪಾವತಿ ಉತ್ತೇಜಿಸಲಿವೆ. ಜನರ ಬದುಕನ್ನು ಸುಲಲಿತಗೊಳಿಸಲಿವೆ’ ಎಂದು ತಿಳಿಸಿದ್ದಾರೆ.

ವಿದೇಶಿ ಹೂಡಿಕೆದಾರರ ಮೇಲೆ ತೆರಿಗೆ, ಬ್ಯಾಂಕ್‌ಗಳಿಂದ ₹ 1 ಕೋಟಿಗಿಂತ ಹೆಚ್ಚಿನ ಮೊತ್ತದ ನಗದು ಹಿಂದೆ ಪಡೆಯುವುದರ ಮೇಲೆ ಶೇ 2ರಷ್ಟು ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್‌) ಕ್ರಮವನ್ನು ಸಚಿವೆ ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ವಾರ್ಷಿಕ ಆದಾಯ ₹ 2 ಕೋಟಿಗಿಂತ ಹೆಚ್ಚಿಗೆ ಇರುವ ವ್ಯಕ್ತಿಗಳ ಮೇಲೆ ತೆರಿಗೆ ಹೊರೆ ಹೆಚ್ಚಿಸುವ ಪ್ರಸ್ತಾವವು ವಿದೇಶಿ ಹೂಡಿಕೆದಾರರನ್ನು (ಎಫ್‌ಪಿಐ) ಬಾಧಿಸಲಾರದು. ಈ ಹೂಡಿಕೆದಾರರು ಕಂಪನಿ ಹೆಸರಿನಲ್ಲಿ ಹಣ ತೊಡಗಿಸುವುದರಿಂದ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರದು ಎಂದು ವಿವರಣೆ ನೀಡಿದ್ದಾರೆ.

‘ಹೊಸ ನೇರ ತೆರಿಗೆ ಸಂಹಿತೆ (ಡಿಟಿಸಿ) ಅಂತಿಮಗೊಳಿಸಲು ಹಣಕಾಸು ಸಚಿವಾಲಯವು ಈಗಾಗಲೇ ಕಾರ್ಯಪಡೆ ರಚಿಸಿದೆ’ ಎಂದು ತಿಳಿಸಿದ್ದಾರೆ. ನ್ಯೂಸ್‌ಪ್ರಿಂಟ್‌ ಮೇಲಿನ ಶೇ 10ರಷ್ಟು ಕಸ್ಟಮ್ಸ್‌ ಡ್ಯೂಟಿ ಹೆಚ್ಚಳ ರದ್ದು ಮಾಡಲು ಪ್ರತಿಪಕ್ಷಗಳು ಒತ್ತಾಯಿಸಿದ್ದರೂ ಆ ಬಗ್ಗೆ ಏನನ್ನೂ ಹೇಳಿಲ್ಲ.

ನ್ಯೂಸ್‌ಪ್ರಿಂಟ್‌ ಮೇಲಿನ ಕಸ್ಟಮ್ಸ್‌ ಡ್ಯೂಟಿ ಹೆಚ್ಚಳವು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಮಾರಕವಾಗಿರಲಿದೆ. ಹೀಗಾಗಿ ಅದನ್ನು ಕೈಬಿಡಬೇಕು ಎಂದು ಹಲವು ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.