ADVERTISEMENT

ಬ್ಯಾಂಕ್‌ಗಳ ಬಂಡವಾಳ ಅಗತ್ಯ; ಸೆಪ್ಟೆಂಬರ್‌ ನಂತರ ಪರಾಮರ್ಶೆ

ಎನ್‌ಪಿಎ ಹೆಚ್ಚಳ ಆತಂಕ; ಹಣಕಾಸು ಸಚಿವಾಲಯ

ಪಿಟಿಐ
Published 5 ಜುಲೈ 2020, 15:28 IST
Last Updated 5 ಜುಲೈ 2020, 15:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಂಡವಾಳ ಅಗತ್ಯವನ್ನುಸೆಪ್ಟೆಂಬರ್‌ ನಂತರ ಪರಾಮರ್ಶಿಸಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕೋವಿಡ್‌ ಪಿಡುಗಿನಿಂದಾಗಿ ಆರ್ಥಿಕತೆಯು ಕುಂಠಿತಗೊಂಡಿರುವುದರಿಂದ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಗಮನಾರ್ಹವಾಗಿ ಹೆಚ್ಚಲಿದೆ ಎನ್ನುವ ಆತಂಕ ಕಂಡುಬರುತ್ತಿದೆ. ಅವಧಿ ಸಾಲಗಳ ಮರುಪಾವತಿಯನ್ನು 6 ತಿಂಗಳವರೆಗೆ (ಆಗಸ್ಟ್‌ವರೆಗೆ ) ಮುಂದೂಡಲಾಗಿದೆ. ಹೀಗಾಗಿ ‘ಎನ್‌ಪಿಎ’ ಪ್ರಮಾಣವು ಶೇ 4.50ರಷ್ಟು ಹೆಚ್ಚಳಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ದ್ವೀತಿಯ ತ್ರೈಮಾಸಿಕ ಕೊನೆಗೊಂಡ ನಂತರವೇ ಬ್ಯಾಂಕ್‌ಗಳ ‘ಎನ್‌ಪಿಎ’ದ ನೈಜ ಚಿತ್ರಣ ಕಂಡು ಬರಲಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಬ್ಯಾಂಕ್‌ಗಳು ಹೆಚ್ಚಳಗೊಳ್ಳುವ ‘ಎನ್‌ಪಿಎ’ಗಾಗಿ ಭವಿಷ್ಯದಲ್ಲಿ ತೆಗೆದು ಇರಿಸಬೇಕಾದ ಮೊತ್ತವನ್ನೂ ಹೆಚ್ಚಿಸಬೇಕಾಗುತ್ತದೆ.

ADVERTISEMENT

ಕೋವಿಡ್‌ನಿಂದ ತೀವ್ರವಾಗಿ ಬಾಧಿತ ವಲಯಗಳ ಸಾಲಗಳ ಮರು ಹೊಂದಾಣಿಕೆ ಸಲಹೆಯನ್ನು ಆರ್‌ಬಿಐ ಪರಿಗಣಿಸಿದರೆ ಬ್ಯಾಂಕ್‌ಗಳು ಎದುರಿಸುತ್ತಿರುವ ಹಣಕಾಸು ಬಿಕ್ಕಟ್ಟು ಕೆಲಮಟ್ಟಿಗೆ ಕಡಿಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

‘ಆರ್ಥಿಕತೆ ಮುನ್ನಡೆಸಲು ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರದಿಂದ ಹಣಕಾಸು ಬೆಂಬಲದ ಅಗತ್ಯ ಇದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಖಾಸಗಿ ಬ್ಯಾಂಕ್‌ಗಳು ವಿವಿಧ ಮೂಲಗಳಿಂದ ಬಂಡವಾಳ ಸಂಗ್ರಹಿಸಬೇಕು’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಮತ್ತು ಪ್ರಮುಖ ಬ್ಯಾಂಕರ್‌ ಕೂಡ ಆಗಿರುವ ಉದಯ್‌ ಕೋಟಕ್‌ ಹೇಳಿದ್ದಾರೆ.

‘ಸರ್ಕಾರವು ವಿತ್ತೀಯ ಕೊರತೆ ಹೆಚ್ಚಳದ ಸಮಸ್ಯೆ ಎದುರಿಸುತ್ತಿದೆ. ಸಾಲದ ಅಗತ್ಯ ಪೂರೈಸಲು ಬ್ಯಾಂಕಿಂಗ್‌ ವಲಯಕ್ಕೆ ತುರ್ತಾಗಿ ₹ 3 ಲಕ್ಷದಿಂದ ₹ 4 ಲಕ್ಷ ಕೋಟಿ ಮೊತ್ತದ ಪುನರ್ಧನದ ನೆರವಿನ ಅಗತ್ಯ ಇದೆ’ ಎಂದಿದ್ದರು.

ಹಿಂದಿನ ಹಣಕಾಸು ವರ್ಷದಲ್ಲಿ ಸರ್ಕಾರವು, ಬ್ಯಾಂಕಿಂಗ್‌ ವಲಯಕ್ಕೆ ₹ 65,443 ಕೋಟಿ ಮೊತ್ತದ ನೆರವು ಕಲ್ಪಿಸಿತ್ತು.

₹ 65,443 ಕೋಟಿ

2019–20ರಲ್ಲಿನ ಪುನರ್ಧನದ ಮೊತ್ತ

4.5 %

ಸೆಪ್ಟೆಂಬರ್‌ ನಂತರ ಎನ್‌ಪಿಎ ಹೆಚ್ಚಳದ ಆತಂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.