ADVERTISEMENT

ಆಮ್ಲಜನಕ ಘಟಕಕ್ಕೆ ಸುಲಭ ಸಾಲ: ಕೇಂದ್ರ ಹಣಕಾಸು ಸಚಿವಾಲಯ

ತುರ್ತು ಸಾಲ ಖಾತರಿ ಯೋಜನೆಯ ವ್ಯಾಪ್ತಿ ವಿಸ್ತರಣೆ

ಪಿಟಿಐ
Published 30 ಮೇ 2021, 22:21 IST
Last Updated 30 ಮೇ 2021, 22:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಆಮ್ಲಜನಕ ಲಭ್ಯತೆಯನ್ನು ಹೆಚ್ಚಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ. ಆಮ್ಲಜನಕ ಉತ್ಪಾದನೆ ಘಟಕ ಸ್ಥಾಪನೆಗೆ ರಿಯಾಯಿತಿ ಬಡ್ಡಿದರದಲ್ಲಿ
₹ 2 ಕೋಟಿಯವರೆಗೂ ಸಾಲ ನೀಡಲು ಸಾಧ್ಯವಾಗುವಂತೆ ‘ತುರ್ತು ಸಾಲ ಖಾತರಿ ಯೋಜನೆ’ಯನ್ನು(ಇಸಿಎಲ್‌ಜಿಎಸ್‌) ವಿಸ್ತರಿಸಲಾಗಿದೆ.

ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ವೈದ್ಯಕೀಯ ಕಾಲೇಜುಗಳು ಆಮ್ಲಜನಕ ಉತ್ಪಾದನೆ ಘಟಕ ಸ್ಥಾಪಿಸುವುದಾದರೆ ಇಸಿಎಲ್‌ಜಿಎಸ್‌ ಅಡಿಯಲ್ಲಿ ಶೇಕಡ 100ರಷ್ಟು ಖಾತರಿಯಲ್ಲಿ ಸಾಲ
ಪಡೆಯಬಹುದಾಗಿದೆ. ಈ ಸಾಲಗಳಿಗೆ ಶೇ 7.5ರ ಗರಿಷ್ಠ ಬಡ್ಡಿದರವನ್ನು ಕೇಂದ್ರ ಹಣಕಾಸು ಸಚಿವಾಲಯ ನಿಗದಿಪಡಿಸಿದೆ.

ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯು ಆರ್ಥಿಕತೆಯ ಎಲ್ಲಾ ವಲಯಗಳ ಮೇಲೆಯೂ ಹೆಚ್ಚಿನ ಪರಿಣಾಮ ಬೀರಿದೆ. ಇದರಿಂದಾಗಿ ಸರ್ಕಾರವು ಯೋಜನೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದೆ ಎಂದು ಸಚಿವಾಲಯ ಹೇಳಿದೆ.

ADVERTISEMENT

ಇಸಿಎಲ್‌ಜಿಎಸ್‌ 1.0 ಅಡಿಯಲ್ಲಿ, ಬಡ್ಡಿ ಪಾವತಿಯನ್ನೂ ಒಳಗೊಂಡು ನಾಲ್ಕು ವರ್ಷಗಳಲ್ಲಿ ಸಾಲ
ಮರುಪಾವತಿಗೆ ಅವಕಾಶ ನೀಡಲಾಗಿತ್ತು. ಮೊದಲ 12 ತಿಂಗಳಿನಲ್ಲಿ ಕೇವಲ ಬಡ್ಡಿಯನ್ನು ಮತ್ತು 36 ತಿಂಗಳಿನಲ್ಲಿ ಅಸಲು ಮತ್ತು ಬಡ್ಡಿಯನ್ನು ಪಾವತಿಸಬೇಕಿತ್ತು. ಆದರೆ,ಆರ್‌ಬಿಐ ಮೇ 5ರಂದು ಹೊರಡಿಸಿರುವ ಸಾಲ ಮರುಹೊಂದಾಣಿಕೆ ಮಾರ್ಗಸೂಚಿಯ ಅನ್ವಯ ಸಾಲ ಮರುಪಾವತಿಗೆ ಒಟ್ಟಾರೆ ಐದು ವರ್ಷ ಅವಕಾಶ ಸಿಗಲಿದೆ. ಮೊದಲ 24 ತಿಂಗಳಿನಲ್ಲಿ ಬಡ್ಡಿ ಮಾತ್ರ ಪಾವತಿಸಿ ನಂತರ 36 ತಿಂಗಳಿನಲ್ಲಿ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸುವ ಅವಕಾಶ ನೀಡಲಾಗಿದೆ.

ಯೋಜನೆಯಲ್ಲಿ ತಂದಿರುವ ಬದಲಾವಣೆಯಿಂದ ಎಂಎಸ್‌ಎಂಇಗಳಿಗೆ ಹೆಚ್ಚುವರಿ ಬೆಂಬಲ ಸಿಗಲಿದೆ. ತಡೆರಹಿತವಾಗಿ ವ್ಯಾಪಾರ ವಹಿವಾಟು ನಡೆಸಲು ಮತ್ತು ಜೀವನೋಪಾಯಕ್ಕೆ ನೆರವಾಗಲಿದೆ ಎಂದುಸಚಿವಾಲಯ ತಿಳಿಸಿದೆ.

₹ 46 ಸಾವಿರ ಕೋಟಿ ವಿತರಣೆಗಷ್ಟೇ ಅವಕಾಶ

ಮುಂಬೈ: ₹ 3 ಲಕ್ಷ ಕೋಟಿ ಮೊತ್ತದ ಇಸಿಎಲ್‌ಜಿಸಿ ಯೋಜನೆಯಡಿ ಈಗಾಗಲೇ ₹ 2.54ಲಕ್ಷ ಕೋಟಿ ಮೊತ್ತವನ್ನು ಮಂಜೂರು ಮಾಡಲಾಗಿದೆ. ಹೀಗಾಗಿ ಇನ್ನು ₹ 46 ಸಾವಿರ ಕೋಟಿಯನ್ನಷ್ಟೇ ವಿತರಿಸಲು ಅವಕಾಶ ಇದೆ ಎಂದು ಭಾರತೀಯ ಬ್ಯಾಂಕ್‌ಗಳ ಒಕ್ಕೂಟ (ಐಬಿಎ) ಹೇಳಿದೆ.

ಕೇಂದ್ರ ಸರ್ಕಾರವು ಯೋಜನೆಯ ವ್ಯಾಪ್ತಿಯನ್ನು ವಿಸ್ತರಣೆ ಮಾಡಿರುವ ಕುರಿತು ಐಬಿಎನ ಸಿಇಒ ಸುನಿಲ್‌ ಮೆಹ್ತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಯೋಜನೆಯ ಒಟ್ಟು ಮೊತ್ತದಲ್ಲಿ ₹ 2.54 ಲಕ್ಷ ಕೋಟಿ ಮಂಜೂರು ಮಾಡಿದ್ದು ಅದರಲ್ಲಿ ₹ 2.40 ಲಕ್ಷ ಕೋಟಿಯನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಇನ್ನುಳಿದಿರುವುದು ಕೇವಲ ₹ 46 ಸಾವಿರ ಕೋಟಿಗಳಷ್ಟೇ’ ಎಂದು ಅವರು ಮಾಹಿತಿ ನೀಡಿದರು.

ಕೋವಿಡ್‌ ಚಿಕಿತ್ಸೆಗೆ ₹ 5 ಲಕ್ಷದವರೆಗೆ ವೈಯಕ್ತಿಕ ಸಾಲ

ಬೆಂಗಳೂರು: ಕೋವಿಡ್‌ ಚಿಕಿತ್ಸೆಗಾಗಿ ಯಾವುದೇ ಮೇಲಾಧಾರ ಇಲ್ಲದೆ ₹ 25 ಸಾವಿರದಿಂದ ₹ 5 ಲಕ್ಷದವರೆಗೆ ವೈಯಕ್ತಿಕ ಸಾಲ ನೀಡಲು ಸರ್ಕಾರಿ ವಲಯದ ಬ್ಯಾಂಕ್‌ಗಳು ನಿರ್ಧರಿಸಿವೆ. ವೇತನ ವರ್ಗ, ವೇತನ ವರ್ಗಕ್ಕೆ ಸೇರದವರು ಮತ್ತು ಪಿಂಚಣಿದಾರರು ಇದರ ಪ್ರಯೋಜನ ಪಡೆಯಬಹುದಾಗಿದೆ. ಕೋವಿಡ್‌ ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಒಳಗಾಗಿರುವ ಎಲ್ಲಾ ವಲಯಗಳಿಗೆ ನೆರವಾಗುವ ಉದ್ದೇಶದಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು ಭಾನುವಾರ ಘೋಷಿಸಿರುವ ಹಲವು ಕ್ರಮಗಳಲ್ಲಿ ಇದು ಸಹ ಒಂದಾಗಿದೆ.

ಭಾನುವಾರ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಅಧ್ಯಕ್ಷ ದಿನೇಶ್‌ ಕುಮಾರ್ ಖಾರಾ ಮತ್ತು ಭಾರತೀಯ ಬ್ಯಾಂಕ್‌ಗಳ ಒಕ್ಕೂಟದ ಅಧ್ಯಕ್ಷ (ಐಬಿಎ) ರಾಜ್‌ಕಿರಣ್‌ ರೈ ಅವರು ಈ ಕುರಿತು ಮಾಹಿತಿ ನೀಡಿದರು. ಆರೋಗ್ಯ ಮೂಲಸೌಕರ್ಯ ಸ್ಥಾಪನೆ/ವಿಸ್ತರಣೆ ಮತ್ತು ಆರೊಗ್ಯ ಸೇವೆಗಳಿಗೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆಗೆ ₹100 ಕೋಟಿಗಳವರೆಗೆಸಾಲ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.