ADVERTISEMENT

ವಿತ್ತೀಯ ಕೊರತೆಗೆ ಕಡಿವಾಣ ಮುಖ್ಯ

ಐಎಂಎಫ್‌ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಸಲಹೆ

ಪಿಟಿಐ
Published 16 ಅಕ್ಟೋಬರ್ 2019, 13:45 IST
Last Updated 16 ಅಕ್ಟೋಬರ್ 2019, 13:45 IST
ಗೀತಾ ಗೋಪಿನಾಥ
ಗೀತಾ ಗೋಪಿನಾಥ   

ವಾಷಿಂಗ್ಟನ್‌ : ‘ಭಾರತವು ತನ್ನ ವಿತ್ತೀಯ ಕೊರತೆಗೆ ಕಡಿವಾಣ ಹಾಕುವುದು ಮುಖ್ಯವಾಗಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಆರ್ಥಿಕ ತಜ್ಞೆಯಾಗಿರುವ ಗೀತಾ ಗೋಪಿನಾಥ್‌ ಅವರು ಹೇಳಿದ್ದಾರೆ.

‘ಕೇಂದ್ರ ಸರ್ಕಾರದ ವರಮಾನ ಹೆಚ್ಚಳ ನಿರೀಕ್ಷೆಯು ಆಶಾದಾಯವಾಗಿದ್ದರೂ, ವಿತ್ತೀಯ ಕೊರತೆ ಹೆಚ್ಚಳವಾಗದಂತೆ ನೋಡಿಕೊಳ್ಳುವುದು ಸದ್ಯದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿದೆ’ ಎಂದು ಭಾರತದ ಸಂಜಾತೆಯಾಗಿರುವ ಗೀತಾ ಗೋಪಿನಾಥ್‌ ಅವರು ತಿಳಿಸಿದ್ದಾರೆ. ವಿಶ್ವಬ್ಯಾಂಕ್‌ ಮತ್ತು ಐಎಂಎಫ್‌ನ ವಾರ್ಷಿಕ ಸಭೆ ಮುಂಚೆ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

2018ರಲ್ಲಿ ಭಾರತದ ಆರ್ಥಿಕ ವೃದ್ಧಿ ದರ ಶೇ 6.8ರಷ್ಟು ಹೆಚ್ಚಳ ದಾಖಲಿಸಿತ್ತು. ಮಂಗಳವಾರ ಬಿಡುಗಡೆ ಮಾಡಲಾದ ಜಾಗತಿಕ ಆರ್ಥಿಕ ಮುನ್ನೋಟದಲ್ಲಿ ಇದನ್ನು ಶೇ 6.1ಕ್ಕೆ ತಗ್ಗಿಸಲಾಗಿದೆ. 2020ರಲ್ಲಿ ಶೇ 7ರಷ್ಟು ದರದಲ್ಲಿ ಚೇತರಿಸಿಕೊಳ್ಳಲಿದೆ ಎಂದು ಅಂದಾಜಿಸಿದೆ.

ADVERTISEMENT

ಹಣಕಾಸು ಸಂಕಷ್ಟಗಳ ಕರಿನೆರಳು: ‘ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಕಂಡು ಬಂದಿರುವ ನಗದ ಬಿಕ್ಕಟ್ಟು, ಗ್ರಾಹಕರು ಹಾಗೂ ಸಣ್ಣ ಕೈಗಾರಿಕೆಗಳಿಗೆ (ಎಸ್‌ಎಂಇ) ಸುಲಭವಾಗಿ ಸಾಲ ಸಿಗದಿರುವುದು ಭಾರತದ ಆರ್ಥಿಕ ವೃದ್ಧಿ ದರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ’ ಎಂದು ಹೇಳಿದ್ದಾರೆ.

ದೇಶಿ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳಿಗೆ ಪ್ರತಿಯಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇತ್ತೀಚೆಗೆ ತೆಗೆದುಕೊಂಡಿರುವ ಕೆಲವು ಕ್ರಮಗಳನ್ನು ಗೀತಾ ಅವರು ಶ್ಲಾಘಿಸಿದ್ದಾರೆ. ‘ಈ ಕ್ರಮಗಳು ಸಾಲುವುದಿಲ್ಲ. ಇನ್ನೂ ಹೆಚ್ಚಿನ ಸುಧಾರಣೆಗಳ ಅಗತ್ಯ ಇದೆ’ ಎಂದೂ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3ಕ್ಕೆ ಮಿತಿಗೊಳಿಸಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಗುರಿ ನಿಗದಿಪಡಿಸಿದೆ. ಹಿಂದಿನ ವರ್ಷ ಇದು ಶೇ 3.4ರಷ್ಟಿತ್ತು. ಕಂಪನಿ ತೆರಿಗೆ ಇಳಿಕೆ, ವಿವಿಧ ಸರಕುಗಳ ಮೇಲಿನ ಜಿಎಸ್‌ಟಿ ಕಡಿತ, ಮಂದಗತಿಯ ಆರ್ಥಿಕತೆ, ವರಮಾನ ಸಂಗ್ರಹದಲ್ಲಿನ ನಿಧಾನ ಪ್ರಗತಿಯು ವಿತ್ತೀಯ ಕೊರತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.