ADVERTISEMENT

‘ಮಂಥನ್‌’ ಕಾರ್ಯಕ್ರಮಕ್ಕೆ ಉಪ ರಾಷ್ಟ್ರಪತಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 15:33 IST
Last Updated 9 ಮಾರ್ಚ್ 2024, 15:33 IST
ಬೆಂಗಳೂರಿಗೆ ಭೇಟಿ ನೀಡಿದ್ದ ಉಪ ರಾಷ್ಟ್ರಪತಿ ಜಗದೀಶ್‌ ಧನಕರ್‌ ಅವರನ್ನು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ನೇತೃತ್ವದ ನಿಯೋಗವು ಭೇಟಿ ಮಾಡಿತು
ಬೆಂಗಳೂರಿಗೆ ಭೇಟಿ ನೀಡಿದ್ದ ಉಪ ರಾಷ್ಟ್ರಪತಿ ಜಗದೀಶ್‌ ಧನಕರ್‌ ಅವರನ್ನು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ನೇತೃತ್ವದ ನಿಯೋಗವು ಭೇಟಿ ಮಾಡಿತು   

ಬೆಂಗಳೂರು: ನಗರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ನಿಯೋಗವು, ಸೌಹಾರ್ದ ಭೇಟಿ ಮಾಡಿ ಚರ್ಚಿಸಿತು.

ಜೂನ್‌ನಲ್ಲಿ ಬೆಂಗಳೂರಿನ ಮಹಾಸಂಸ್ಥೆಯ ಸರ್ ಎಂ.ವಿ. ಸಭಾಂಗಣದಲ್ಲಿ 16ನೇ ಆವೃತ್ತಿಯ ‘ಮಂಥನ್-2024’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ನಿಯೋಗವು ಕೋರಿತು. ಇದಕ್ಕೆ ಧನಕರ್‌ ಅವರು ಒಪ್ಪಿಗೆ ಸೂಚಿಸಿದರು.

ನವೋದ್ಯಮಗಳಿಗೆ ಉತ್ತೇಜನ ನೀಡಲು ಹಾಗೂ ಭಾರತದ ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಯಶಸ್ವಿ ಉದ್ಯಮಿಗಳನ್ನಾಗಿ ರೂಪಿಸಲು ಎಫ್‌ಕೆಸಿಸಿಐ ‘ಮಂಥನ್’ ಕಾರ್ಯಕ್ರಮವನ್ನು ರೂಪಿಸಿದೆ. 

ADVERTISEMENT

‘ಈ ಸ್ಪರ್ಧೆಯಲ್ಲಿ ರಾಜ್ಯದ 190ಕ್ಕೂ ಹೆಚ್ಚು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಯುವ ಉದ್ಯಮಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ’ ಎಂದು ನಿಯೋಗದ ನೇತೃತ್ವವಹಿಸಿದ್ದ ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ವಿವರಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ತಂಡಗಳಿಗೆ ಕಾರ್ಯಾಗಾರ ನಡೆಸಲಾಗುತ್ತದೆ. ಅವರ ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ವಾಣಿಜ್ಯಿಕವಾಗಿ ಕಾರ್ಯಗತಗೊಳಿಸಬಹುದಾದ ವ್ಯಾಪಾರ ಯೋಜನೆಗಳಿಗೆ ₹10 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಎಫ್‍ಕೆಸಿಸಿಐನ ಈ ಪ್ರಯತ್ನಕ್ಕೆ ಧನಕರ್‌ ಶ್ಲಾಘಿಸಿದರು. 

ಮಹಾಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಂ.ಜಿ. ಬಾಲಕೃಷ್ಣ,  ಉಪಾಧ್ಯಕ್ಷೆ ಉಮಾ ರೆಡ್ಡಿ, ಮಂಥನ್‌ ಸಮಿತಿ ಅಧ್ಯಕ್ಷರಾದ ಕೀರ್ತನ್ ಕುಮಾರ್‌ ಹಾಗೂ ಮಹಾಸಂಸ್ಥೆಯ ಸದಸ್ಯ ಡಾ.ವಿ.ಜಿ. ಕಿರಣ್ ಕುಮಾರ್ ಈ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.