ADVERTISEMENT

ದುರ್ವರ್ತನೆ ಆರೋಪ: ಫ್ಲಿಪ್‌ಕಾರ್ಟ್‌ ಸಿಇಒ ಬಿನ್ನಿ ಬನ್ಸಲ್‌ ರಾಜೀನಾಮೆ

ಪಿಟಿಐ
Published 14 ನವೆಂಬರ್ 2018, 1:50 IST
Last Updated 14 ನವೆಂಬರ್ 2018, 1:50 IST
ಬಿನ್ನಿ ಬನ್ಸಲ್‌
ಬಿನ್ನಿ ಬನ್ಸಲ್‌   

ನವದೆಹಲಿ:ಇ–ಕಾಮರ್ಸ್‌ನ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಸಿಇಒ ಬಿನ್ನಿ ಬನ್ಸಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘ಅವರ ವಿರುದ್ಧ ಕೇಳಿ ಬಂದಿದ್ದ ಗಂಭೀರ ಸ್ವರೂಪದ ವೈಯಕ್ತಿಕ ದುರ್ವರ್ತನೆ ಆರೋಪಗಳ ಕಾರಣಕ್ಕೆ ಬಿನ್ನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ರಾಜೀನಾಮೆ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬಂದಿದೆ. ತಮ್ಮ ವಿರುದ್ಧದ ಆರೋಪಗಳನ್ನು ಬಿನ್ನಿ ಅವರು ಬಲವಾಗಿ ಅಲ್ಲಗಳೆದಿದ್ದಾರೆ. ಆರೋಪಗಳ ಕುರಿತು ಉದ್ದೇಶಪೂರ್ವಕ ಮತ್ತು ಸಮಗ್ರ ತನಿಖೆ ನಡೆಸುವುದು ನಮ್ಮ ಹೊಣೆಯಾಗಿತ್ತು’ ಎಂದು ಫ್ಲಿಪ್‌ಕಾರ್ಟ್‌ ಸ್ವಾಧೀನಪಡಿಸಿಕೊಂಡಿರುವ ವಾಲ್‌ಮಾರ್ಟ್‌ ತಿಳಿಸಿದೆ.

ಫ್ಲಿಪ್‌ಕಾರ್ಟ್ ಮತ್ತು ವಾಲ್‌ಮಾರ್ಟ್‌ ನಡೆಸಿದ ಸ್ವತಂತ್ರ ತನಿಖೆಯಲ್ಲಿ, ಬಿನ್ನಿ ಬನ್ಸಲ್‌ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ದೃಢೀಕರಿಸುವ ಸಾಕ್ಷ್ಯಾಧಾರಗಳೇನೂ ದೊರೆತಿಲ್ಲ. ಆದರೆ, ಆರೋಪಗಳಿಗೆ ಬಿನ್ನಿ ಅವರ ಪ್ರತಿಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಕಂಡು ಬಂದಿದೆ. ಈ ಕಾರಣಕ್ಕೆ ನಾವು ಅವರ ರಾಜೀನಾಮೆ ಪತ್ರ ಸ್ವೀಕರಿಸಿದ್ದೇವೆ’ ಎಂದು ವಾಲ್‌ಮಾರ್ಟ್‌ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಜಾಗತಿಕ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌, ಫ್ಲಿಪ್‌ಕಾರ್ಟ್‌ ಸ್ವಾಧೀನಪಡಿಸಿಕೊಂಡ 6 ತಿಂಗಳಲ್ಲಿ ಈ ಬೆಳವಣಿಗೆ ನಡೆದಿದೆ. ಸಿಇಒ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರೂ, ಬಿನ್ನಿ ಅವರು ನಿರ್ದೇಶಕ ಮಂಡಳಿಯ ಸದಸ್ಯತ್ವವನ್ನು ಉಳಿಸಿಕೊಳ್ಳುವರೇ ಎನ್ನುವುದು ಸ್ಪಷ್ಟಗೊಂಡಿಲ್ಲ.

ಬಿನ್ನಿ ಬನ್ಸಲ್‌ ಅವರು, ಸಚಿನ್‌ ಬನ್ಸಲ್‌ ಜತೆಗೂಡಿ ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ಆನ್‌ಲೈನ್‌ ಮಾರಾಟ ಮಳಿಗೆ ಫ್ಲಿಪ್‌ಕಾರ್ಟ್‌ಗೆ ಚಾಲನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.