ADVERTISEMENT

ಕುಶಲಕರ್ಮಿಗಳ ನೆರವಿಗೆ ಫ್ಲಿಪ್‍ಕಾರ್ಟ್ ‘ಸಮರ್ಥ್’

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 18:45 IST
Last Updated 20 ಆಗಸ್ಟ್ 2019, 18:45 IST
ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳ ಜತೆ
ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳ ಜತೆ   

ಕರಕುಶಲಕರ್ಮಿಗಳನ್ನು ಇ-ಕಾಮರ್ಸ್ ಮಾರುಕಟ್ಟೆಗೆ ಪರಿಚಯಿಸಿ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಿ ಅವರ ಜೀವನಾಧಾರ ಉತ್ತಮಪಡಿಸಲು ಕೇಂದ್ರ ಸರ್ಕಾರವು ಹಲವಾರು ಉತ್ತೇಜನಾ ಕ್ರಮಗಳನ್ನು ಕೈಗೊಂಡಿದೆ. ಇ–ಕಾಮರ್ಸ್‌ ದೈತ್ಯ ಸಂಸ್ಥೆ ಫ್ಲಿಪ್‍ಕಾರ್ಟ್‌ ಕೂಡ ಈಗ ಕುಶಲಕರ್ಮಿಗಳು, ತಂತ್ರಜ್ಞಾನ ಮತ್ತು ಮಾರುಕಟ್ಟೆ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲ ಉತ್ಪನ್ನಗಳ ತಯಾರಕರು ಇ-ಕಾಮರ್ಸ್ ಕ್ಷೇತ್ರಕ್ಕೆ ಕಾಲಿಡಲು ಅನುಕೂಲ ಮಾಡಿಕೊಡಲು ‘ಫ್ಲಿಪ್‍ಕಾರ್ಟ್ ಸಮರ್ಥ್’ ಹೆಸರಿನ ಯೋಜನೆ ಆರಂಭಿಸಿದೆ.ಇದರಿಂದ ಗ್ರಾಮೀಣ ಪ್ರದೇಶದ ಗುಡಿ ಕೈಗಾರಿಕೆಗಳನ್ನು ಬಲಪಡಿಸಲು ಸಾಧ್ಯವಾಗಲಿದೆ.

ಈ ಯೋಜನೆಯು ಕರಕುಶಲರ್ಮಿಗಳು ಮತ್ತು ನೇಕಾರರಿಗೆ ಅವರ ಉತ್ಪನ್ನಗಳಿಗೆ ರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಒದಗಿಸಿಕೊಡಲೂ ನೆರವಾಗುತ್ತದೆ. ಈ ಮೂಲಕ ದೇಶದಾದ್ಯಂತ ಇರುವ 15 ಕೋಟಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ತಲುಪಿಸಬಹುದಾಗಿದೆ. ಈ, ಆನ್‌ಲೈನ್‌ ಮಾದರಿಯ ಮಾರಾಟದ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಈ ಉತ್ಪನ್ನಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡುವ ಮೂಲಕ ಅವುಗಳನ್ನು ಜನಪ್ರಿಯಗೊಳಿಸುವುದರೊಂದಿಗೆ ಕುಶಲಕರ್ಮಿಗಳಿಗೆ ನೆರವಾಗುವ ಹಲವು ಸೇವೆಗಳನ್ನೂ ‘ಸಮರ್ಥ್’ ಒದಗಿಸಿಕೊಡಲಿದೆ. ಸರಕುಗಳ ವಿಂಗಡಣೆ, ಲೆಕ್ಕಪತ್ರ ನಿರ್ವಹಣೆ, ವಹಿವಾಟಿನ ಒಳನೋಟ, ಮಾರಾಟ ಬೆಂಬಲ ಮತ್ತು ಉತ್ಪನ್ನಗಳ ದಾಸ್ತಾನು ಸೌಲಭ್ಯವನ್ನೂ ಒದಗಿಸಿಕೊಡಲಿದೆ.

ಕರಕುಶಲಕರ್ಮಿಗಳ ಕಲ್ಯಾಣಕ್ಕೆ ಶ್ರಮಿಸುವ ಸರ್ಕಾರಗಳ ವಿವಿಧ ಇಲಾಖೆಗಳು, ಸರ್ಕಾರಿಯೇತರ ಸ್ವಯಂ ಸೇವಾ ಸಂಸ್ಥೆಗಳು (ಎನ್‍ಜಿಒ) ಮತ್ತು ಜೀವನೋಪಾಯಕ್ಕೆ ನೆರವಾಗುವ ಸಂಸ್ಥೆಗಳ ಜತೆಯಲ್ಲಿ ‘ಸಮರ್ಥ್’ ಸಹಯೋಗ ಹೊಂದಿರಲಿದೆ. ಈ ಮೂಲಕ ಗ್ರಾಮೀಣ ಭಾಗದ ಉದ್ಯಮಿಗಳನ್ನೂ ತಲುಪಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳಾ ಉದ್ಯಮಿಗಳಿಗೆ ಆದ್ಯತೆ ನೀಡಲಾಗುತ್ತದೆ.

ADVERTISEMENT

ಅಂಗವಿಕಲ ಉದ್ಯಮಿಗಳು, ಕುಶಲಕರ್ಮಿಗಳು, ನೇಕಾರರು ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಕುಶಲಕರ್ಮಿಗಳಿಗೂ ಇಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಇವರಲ್ಲಿ ಬಹುತೇಕ ಮಂದಿ ದುಡಿಯುವ ಬಂಡವಾಳದ ಕೊರತೆ, ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಕೆಲವರಿಗೆ ಸಮರ್ಪಕ ತರಬೇತಿಯೂ ಇರುವುದಿಲ್ಲ. ಈ ಎಲ್ಲ ಕೊರತೆಗಳನ್ನು ನಿವಾರಿಸುವ ಬಗೆಯಲ್ಲಿ ‘ಸಮರ್ಥ್’ ಯೋಜನೆ ವಿನ್ಯಾಸಗೊಳಿಸಲಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಿ ಅವರ ಉತ್ಪನ್ನಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಿದೆ.

‘ದೇಶಿ ಕಂಪನಿಯಾಗಿರುವ ಫ್ಲಿಪ್‍ಕಾರ್ಟ್, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಸೇರಿದಂತೆ ಎಲ್ಲಾ ಬಗೆಯ ಉದ್ಯಮಿಗಳಿಗೆ ನೆರವಿನ ಹಸ್ತ ಚಾಚಲು ಮುಂದಾಗಿದೆ. ವಹಿವಾಟು ಹೆಚ್ಚಿಸಲು ಇ-ಕಾಮರ್ಸ್ ಬಳಕೆಯ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಬರುತ್ತಿದೆ. ‘ಫ್ಲಿಪ್‍ಕಾರ್ಟ್ ಸಮರ್ಥ್’ ಮೂಲಕ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯವನ್ನು ಮಾರುಕಟ್ಟೆಗೆ ಮತ್ತು ಗ್ರಾಹಕರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿರುವ 15 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗ್ರಾಹಕರಿಗೆ ಈ ಸಮುದಾಯ ತಯಾರಿಸುವ ಉತ್ಪನ್ನಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದು ಫ್ಲಿಪ್‍ಕಾರ್ಟ್ ಗ್ರೂಪ್‍ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.