ADVERTISEMENT

ಆರ್‌ಬಿಐ ನಿಲುವು: ಜೇಟ್ಲಿ ಟೀಕೆ

‘ಎನ್‌ಪಿಎ’ ಹೆಚ್ಚಳಕ್ಕೆ ಕೇಂದ್ರೀಯ ಬ್ಯಾಂಕ್‌ನ ನಿರ್ಲಕ್ಷ್ಯ ಧೋರಣೆಯೇ ಕಾರಣ

ಪಿಟಿಐ
Published 30 ಅಕ್ಟೋಬರ್ 2018, 20:00 IST
Last Updated 30 ಅಕ್ಟೋಬರ್ 2018, 20:00 IST
ಅರುಣ್‌ ಜೇಟ್ಲಿ
ಅರುಣ್‌ ಜೇಟ್ಲಿ   

ನವದೆಹಲಿ: ‘ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸದ್ಯಕ್ಕೆ ಕಂಡು ಬರುತ್ತಿರುವ ವಸೂಲಾಗದ ಸಾಲದ (ಎನ್‌ಪಿಎ) ಸಮಸ್ಯೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹೊಣೆಗೇಡಿತನವೇ ಕಾರಣ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಕಟುವಾಗಿ ಟೀಕಿಸಿದ್ದಾರೆ.

ಜೇಟ್ಲಿ ಅವರ ಈ ಹೇಳಿಕೆಯು, ಆರ್‌ಬಿಐನ ಸ್ವಾಯತ್ತತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ ಮಧ್ಯೆ ನಡೆಯುತ್ತಿರುವ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸಲಿದೆ.

‘2008 ರಿಂದ 2014ರ ಅವಧಿಯಲ್ಲಿ ಬ್ಯಾಂಕ್‌ಗಳು ಬೇಕಾಬಿಟ್ಟಿಯಾಗಿ ಸಾಲ ಮಂಜೂರು ಮಾಡುವಾಗ ಬ್ಯಾಂಕಿಂಗ್‌ ನಿಯಂತ್ರಣ ಸಂಸ್ಥೆಯಾಗಿರುವ ಆರ್‌ಬಿಐ ಅದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಲಿಲ್ಲ. ಅದು ಬೇರೆಡೆ ಗಮನ ಕೇಂದ್ರೀಕರಿಸಿತ್ತು. ಇದರಿಂದ ‘ಎನ್‌ಪಿಎ’ ಬೆಟ್ಟದಂತೆ ಬೆಳೆಯುತ್ತ ಹೋಯಿತು.

ADVERTISEMENT

‘2008ರಲ್ಲಿನ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ, ಅರ್ಥ ವ್ಯವಸ್ಥೆಯು ಪ್ರಗತಿಪಥದತ್ತ ಸಾಗುತ್ತಿರುವುದರ ಬಗ್ಗೆ ಹುಸಿ ನಂಬಿಕೆ ಮೂಡಿಸಲು, ಬ್ಯಾಂಕ್‌ಗಳು ಉದಾರವಾಗಿ ಸಾಲ ನೀಡಬೇಕು ಎಂದು ಸೂಚಿಸಲಾಗಿತ್ತು. ಈ ಹಂತದಲ್ಲಿ ಬ್ಯಾಂಕ್‌ಗಳು ಯಾವುದೇ ಎಗ್ಗಿಲ್ಲದೆ ಸಾಲ ನೀಡುವುದರ ಮೇಲೆ ಆರ್‌ಬಿಐ ನಿಯಂತ್ರಣ ಹೊಂದಿರಲಿಲ್ಲ’ ಎಂದು ಜೇಟ್ಲಿ ಹೇಳಿದ್ದಾರೆ. ಭಾರತ – ಅಮೆರಿಕ ಪಾಲುದಾರಿಕೆ ವೇದಿಕೆಯು ಇಲ್ಲಿ ಏರ್ಪಡಿಸಿರುವ ‘ಭಾರತ ನಾಯಕತ್ವ ಶೃಂಗಸಭೆ’ಯಲ್ಲಿ ಅವರು ಮಾತನಾಡುತ್ತಿದ್ದರು.

‘ಸದ್ಯಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಸರ್ಕಾರವು ಸಾಲ ನೀಡಿಕೆಗೆ ಬ್ಯಾಂಕ್‌ಗಳಿಗೆ ಉತ್ತೇಜನ ನೀಡುತ್ತಿದೆ. ಇದರಿಂದ ಒಂದು ವರ್ಷದಲ್ಲಿ ಸಾಲ ನೀಡಿಕೆ ಪ್ರಮಾಣವು ಸರಾಸರಿ ಶೇ 13 ರಿಂದ ಶೇ 31ಕ್ಕೆ ಏರಿಕೆಯಾಗಿದೆ’ ಎಂದರು.

ಹಣಕಾಸು ನೀತಿ, ಬ್ಯಾಂಕ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಕುರಿತು ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಮಧ್ಯೆ ಇತ್ತೀಚೆಗೆ ಜಟಾಪಟಿ ನಡೆಯುತ್ತಿದೆ.

‘ಕೇಂದ್ರೀಯ ಬ್ಯಾಂಕ್‌ನ ಸ್ವತಂತ್ರ ಕಾರ್ಯನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುತ್ತಿದೆ’ ಎಂದು ಆರ್‌ಬಿಐನ ಡೆಪ್ಯುಟಿ ಗವರ್ನರ್‌ ವಿರಲ್‌ ಆಚಾರ್ಯ ಅವರು ಹಿಂದಿನ ವಾರ ಟೀಕಿಸಿದ್ದರು.

ಎನ್‌ಬಿಎಫ್‌ಸಿ’ ನಗದು ಕೊರತೆ ಇಲ್ಲ

ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಎದುರಿಸುತ್ತಿರುವ ನಗದುತನ ಕೊರತೆ ಸಮಸ್ಯೆಯನ್ನು ಉನ್ನತ ಮಟ್ಟದ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯು (ಎಫ್‌ಎಸ್‌ಡಿಸಿ) ಮಂಗಳವಾರ ಪರಾಮರ್ಶಿಸಿತು.

ಕೇಂದ್ರ ಹಣಕಾಸು ಸಚಿವ ಜೇಟ್ಲಿ ನೇತೃತ್ವದಲ್ಲಿನ ಮಂಡಳಿಯ ಸಭೆಯಲ್ಲಿ ಆರ್‌ಬಿಐ ಗವರ್ನರ್‌, ಷೇರು ನಿಯಂತ್ರಣ ಮಂಡಳಿ (ಸೆಬಿ), ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ), ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ), ದಿವಾಳಿ ಮಂಡಳಿ (ಐಬಿಬಿಐ) ಅಧ್ಯಕ್ಷರು ಭಾಗವಹಿಸಿದ್ದರು.

‘ಎನ್‌ಬಿಎಫ್‌ಸಿ’ಗಳ ನಗದುತನ ಸಮಸ್ಯೆಯು ಮಾಧ್ಯಮಗಳಲ್ಲಿ ವರದಿಯಾಗಿರುವಷ್ಟು ವಿಷಮಗೊಂಡಿಲ್ಲ. ಹಣಕಾಸು ಮಾರುಕಟ್ಟೆಯಲ್ಲಿ ಅಗತ್ಯ ಇರುವಷ್ಟು ನಗದುತನ ಲಭ್ಯ ಇರುವಂತೆ ನೋಡಿಕೊಳ್ಳಲಾಗುವುದು’ ಎಂದು ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್‌ ಅವರು ಸಭೆಗೆ ಭರವಸೆ ನೀಡಿದ್ದಾರೆ.

ಆರ್‌ಬಿಐನ ಸ್ವಾಯತ್ತತೆ ಬಗ್ಗೆ ಡೆಪ್ಯುಟಿ ಗವರ್ನರ್‌ ವಿರಲ್‌ ಆಚಾರ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ನಂತರ ನಡೆದ ‘ಎಫ್‌ಎಸ್‌ಡಿಸಿ’ಯ ಮೊದಲ ಸಭೆ ಇದಾಗಿದೆ. ಆರ್‌ಬಿಐನ ಎಲ್ಲ ನಾಲ್ಕು ಮಂದಿ ಡೆಪ್ಯುಟಿ ಗವರ್ನರ್‌ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.