ADVERTISEMENT

ಷೇರು ಪೇಟೆ| ಮುಂದುವರಿದ ಕರಡಿ ಕುಣಿತ

ನಾಲ್ಕು ದಿನದಲ್ಲಿ ಕರಗಿದ ₹9.30 ಲಕ್ಷ ಕೋಟಿ ಸಂಪತ್ತು

ಪಿಟಿಐ
Published 18 ಏಪ್ರಿಲ್ 2024, 16:04 IST
Last Updated 18 ಏಪ್ರಿಲ್ 2024, 16:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ದೇಶದ ಷೇರು ಮಾರುಕಟ್ಟೆಗಳಲ್ಲಿ ಗುರುವಾರವೂ ನಕಾರಾತ್ಮಕ ವಹಿವಾಟು ನಡೆಯಿತು. ಬ್ಯಾಂಕ್‌ ಷೇರುಗಳ ಇಳಿಕೆ ಹಾಗೂ ವಿದೇಶಿ ನಿಧಿಯ ಹೊರಹರಿವಿನ ಹೆಚ್ಚಳದಿಂದಾಗಿ ಕರಡಿ ಕುಣಿತ ಮುಂದುವರಿಯಿತು.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತದ ಬಗ್ಗೆ ಹೂಡಿಕೆದಾರರಲ್ಲಿ ಭರವಸೆ ಮರೆಯಾಗಿದೆ. ಮತ್ತೊಂದೆಡೆ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಉಲ್ಬಣವು ಷೇರುಪೇಟೆ ಮೇಲೆ ಪರಿಣಾಮ ಬೀರಿದೆ. ಇದರಿಂದ ಸೂಚ್ಯಂಕಗಳು ಕುಸಿತದ ಹಾದಿ ಹಿಡಿದಿವೆ. 

ADVERTISEMENT

ಒಂದೇ ದಿನ ಹೂಡಿಕೆದಾರರ ಸಂಪತ್ತು ₹1.37 ಲಕ್ಷ ಕೋಟಿ ಕಡಿಮೆಯಾಗಿದೆ. ನಾಲ್ಕು ದಿನದಲ್ಲಿ ಒಟ್ಟು ₹9.30 ಲಕ್ಷ ಕೋಟಿ ಸಂಪತ್ತು ಕರಗಿದೆ.  

ಸೆನ್ಸೆಕ್ಸ್‌ 454 ಅಂಶ ಕುಸಿತ ಕಂಡು 72,488ಕ್ಕೆ ಅಂತ್ಯಗೊಂಡಿತು. ನಿಫ್ಟಿ 152 ಅಂಶ ಇಳಿದು 21,995ಕ್ಕೆ ಕೊನೆಗೊಂಡಿತು. 

ಟೈಟನ್‌, ಎಕ್ಸಿಸ್‌ ಬ್ಯಾಂಕ್‌, ಎನ್‌ಟಿಪಿಸಿ, ಟಾಟಾ ಮೋಟರ್ಸ್‌, ಐಟಿಸಿ, ಟೆಕ್‌ ಮಹೀಂದ್ರ, ಬಜಾಜ್‌ ಫಿನ್‌ಸರ್ವ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಬಜಾಜ್‌ ಫೈನಾನ್ಸ್‌ ಷೇರಿನ ಮೌಲ್ಯ ಇಳಿದಿದೆ.

ಭಾರ್ತಿ ಏರ್‌ಟೆಲ್‌, ಪವರ್‌ಗ್ರಿಡ್‌, ಇನ್ಫೊಸಿಸ್‌ ಮತ್ತು ಲಾರ್ಸೆನ್‌ ಆ್ಯಂಡ್‌ ಟೊಬ್ರೊ ಗಳಿಕೆ ಕಂಡಿವೆ. ಬಿಎಸ್‌ಇ ಮಿಡ್‌ ಕ್ಯಾಪ್‌ ಸೂಚ್ಯಂಕ ಶೇ 0.39 ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 0.06ರಷ್ಟು ಇಳಿದಿದೆ.

Cut-off box - ಜಸ್ಟ್‌ ಡಯಲ್‌ ಷೇರು ಶೇ 13ರಷ್ಟು ಜಿಗಿತ 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಜಸ್ಟ್‌ ಡಯಲ್‌ನ ನಿವ್ವಳ ಲಾಭವು ಶೇ 38ರಷ್ಟು ಏರಿಕೆಯಾದ ಬೆನ್ನಲ್ಲೇ ಕಂಪನಿಯ ಷೇರಿನ ಮೌಲ್ಯ ಶೇ 13ರಷ್ಟು ಹೆಚ್ಚಾಗಿದೆ. 52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಕ್ರಮವಾಗಿ ಶೇ 12.97 ಮತ್ತು ಶೇ 13.38ರಷ್ಟು ಏರಿಕೆಯಾಗಿದೆ. ಪ್ರತಿ ಷೇರಿನ ಬೆಲೆ ₹1010ಕ್ಕೆ ಮುಟ್ಟಿದೆ. ವಹಿವಾಟಿನಲ್ಲಿ ಷೇರಿನ ಮೌಲ್ಯ ಶೇ 15ರ ವರೆಗೆ ಹೆಚ್ಚಾಗಿತ್ತು. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹986 ಕೋಟಿ ಸೇರ್ಪಡೆಯಾಗಿದೆ. ಒಟ್ಟು ಎಂ–ಕ್ಯಾಪ್‌ ₹8588 ಕೋಟಿಗೆ ಮುಟ್ಟಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.