ADVERTISEMENT

ಎಫ್‌ಪಿಐ: ₹10,874 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 15:33 IST
Last Updated 9 ಡಿಸೆಂಬರ್ 2023, 15:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರು ಭಾರತದ ಷೇರುಪೇಟೆಗಳಲ್ಲಿ ಮತ್ತೆ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ಡಿಸೆಂಬರ್‌ 8ರವರೆಗೆ ನಡೆದಿರುವ ವಹಿವಾಟಿನಲ್ಲಿ ₹10,874 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಪ್ರೈಮರಿ ಮಾರುಕಟ್ಟೆಯಲ್ಲಿ (ಐಪಿಒ, ಡೈರೆಕ್ಟ್ ಲೀಸ್ಟಿಂಗ್‌...ಇತ್ಯಾದಿ) ಆಗಿರುವ ಹೂಡಿಕೆಯನ್ನೂ ಸೇರಿಸಿದರೆ ಒಟ್ಟು ಹೂಡಿಕೆಯು ₹26,605 ಕೋಟಿಯಷ್ಟು ಆಗುತ್ತದೆ.

ಭಾರತದಲ್ಲಿ ವಿದೇಶಿ ಹೂಡಿಕೆದಾರರು ಮತ್ತೆ ಬಂಡವಾಳ ತೊಡಗಿಸಲು ಹಲವು ಅಂಶಗಳು ‍ಪ್ರಭಾವ ಬೀರುತ್ತಿವೆ. 2024ರ ಸಾರ್ವತ್ರಿಕ ಚುನಾವಣೆಯ ಬಳಿಕ ದೇಶದಲ್ಲಿ ರಾಜಕೀಯ ಸ್ಥಿರತೆ ಮೂಡುವ ಸೂಚನೆ ದೊರೆತಿದೆ. ದೇಶದ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ. ಹಣದುಬ್ಬರ ಇಳಿಕೆ ಕಾಣುತ್ತಿದೆ. ಅಮೆರಿಕದ ಬಾಂಡ್ ಗಳಿಕೆ ಪ್ರಮಾಣ ತಗ್ಗಿದೆ. ಈ ಅಂಶಗಳು ಭಾರತಕ್ಕೆ ಅನುಕೂಲಕರವಾಗಿ ಪರಿಣಮಿಸಿವೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ADVERTISEMENT

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 2,344 ಅಂಶಗಳಷ್ಟು ಏರಿಕೆ ಕಂಡಿದ್ದು, 69,825 ಅಂಶಗಳಿಗೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 701 ಅಂಶ ಹೆಚ್ಚಾಗಿ 20,969 ಅಂಶಗಳಿಗೆ ತಲುಪಿದೆ.

ಪಿಟಿಐನಲ್ಲಿ ಇರುವ ಮಾಹಿತಿಯ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಸೋಮವಾರದಿಂದ ಶುಕ್ರವಾರದ ಅವಧಿಯಲ್ಲಿ ಬ್ಯಾರಲ್‌ಗೆ 3.13 ಡಾಲರ್‌ ಇಳಿಕೆ ಕಂಡಿದ್ದು, 75.25 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.