ADVERTISEMENT

ಎಫ್‌ಪಿಐ ಹೂಡಿಕೆ ₹ 20,574 ಕೋಟಿ

ಪಿಟಿಐ
Published 14 ಜೂನ್ 2020, 13:05 IST
Last Updated 14 ಜೂನ್ 2020, 13:05 IST
invest
invest   

ನವದೆಹಲಿ:ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜೂನ್ 1 ರಿಂದ 14ರವರೆಗೆ ಬಂಡವಾಳ ಮಾರುಕಟ್ಟೆಯಲ್ಲಿ ₹ 20,574 ಕೋಟಿ ಹೂಡಿಕೆ ಮಾಡಿದ್ದಾರೆ.‌

ಹೂಡಿಕೆದಾರರು ₹ 22,840 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ₹ 2,266 ಕೋಟಿ ಮೌಲ್ಯದ ಸಾಲ‍ಪತ್ರಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಒಟ್ಟಾರೆ ಹೂಡಿಕೆ ₹ 20,574 ಕೋಟಿಗಳಷ್ಟಾಗಿದೆ.

‘ಬಹುತೇಕ ಎಲ್ಲಾ ದೇಶಗಳು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಮಾರುಕಟ್ಟೆಯಲ್ಲಿ ನಗದು ಕೊರತೆ ಎದುರಾಗದಂತೆ ನೋಡಿಕೊಳ್ಳುತ್ತಿವೆ. ಇದರಿಂದಾಗಿಯೇ ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ’ ಎಂದು ಗ್ರೋವ್‌ ಕಂಪನಿಯ ಸಹಸ್ಥಾಪಕ ಹರ್ಷ್‌ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಮೊದಲ ವಾರಕ್ಕೆ ಹೋಲಿಸಿದರೆ ಎರಡನೇ ವಾರದಲ್ಲಿ ಎಫ್‌ಪಿಐ ಹೂಡಿಕೆ ಕಡಿಮೆಯಾಗಿದೆ. ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ’ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ವ್ಯವಸ್ಥಾಪಕ ಸಂಶೋಧಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ಬಹುತೇಕ ಎಲ್ಲಾ ಆರ್ಥಿಕತೆಗಳೂ ಹಿಂಜರಿತದ ಭೀತಿಯಲ್ಲಿವೆ. ಜತೆಗೆ ಅಮೆರಿಕ–ಚೀನಾ ಬಿಕ್ಕಟ್ಟು ಸಹ ಭಾರತದ ದೃಷ್ಟಿಯಿಂದ ಉತ್ತಮ ಸೂಚನೆಯಲ್ಲ ಎಂದೂ ಹೇಳಿದ್ದಾರೆ.

‘ಅಲ್ಪಾವಧಿ ಹೂಡಿಕೆ ಅವಕಾಶಗಳಷ್ಟೇ ಇದ್ದರೆ ಸಾಲದು. ಷೇರುಪೇಟೆಯಲ್ಲಿನ ಹೂಡಿಕೆ ಸ್ಥಿರವಾಗುವಂತೆ ಮಾಡಬೇಕು. ಕೋವಿಡ್‌ ಪರಿಸ್ಥಿತಿ ಉಲ್ಬಣಿಸಿದರೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮರಳುವ ಸಾಧ್ಯತೆಯೇ ಹೆಚ್ಚಿದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಂಡವಾಳದ ಹೊರ ಹರಿವು

ಮಾರ್ಚ್‌; ₹1.1 ಲಕ್ಷ ಕೋಟಿ

ಏಪ್ರಿಲ್‌; ₹ 15,403 ಕೋಟಿ

ಮೇ; ₹ 7,366 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.