ADVERTISEMENT

ಎಫ್‌ಪಿಐ ಒಳಹರಿವು ₹ 41,330 ಕೋಟಿ

ಪಿಟಿಐ
Published 23 ಆಗಸ್ಟ್ 2020, 11:26 IST
Last Updated 23 ಆಗಸ್ಟ್ 2020, 11:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಆಗಸ್ಟ್‌ 3–21ರ ಅವಧಿಯಲ್ಲಿ ದೇಶದ ಮಾರುಕಟ್ಟೆಯಲ್ಲಿ ₹ 41,330 ಕೋಟಿ ಹೂಡಿಕೆ ಮಾಡಿದ್ದಾರೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುವರಿ ನಗದು ಲಭ್ಯವಿದ್ದು, ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಹೂಡಿಕೆಯಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಹೂಡಿಕೆದಾರರು ₹ 40,262 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ ₹ 1,068 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಜೂನ್‌ನಲ್ಲಿ ₹ 24,053 ಕೋಟಿ ಹಾಗೂ ಜುಲೈನಲ್ಲಿ ₹ 3,301 ಕೋಟಿ ಹೂಡಿಕೆ ಮಾಡಿದ್ದರು.

ADVERTISEMENT

‘ಕೋವಿಡ್‌–19 ಪರಿಣಾಮಗಳಿಂದ ಆರ್ಥಿಕತೆಯನ್ನು ಹೊರತರಲು ವಿವಿಧ ಕೇಂದ್ರೀಯ ಬ್ಯಾಂಕ್‌ಗಳು ಹಲವು ಉತ್ತೇಜನಾ ಕ್ರಮಗಳನ್ನು ಕೈಗೊಂಡಿವೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿ ನಗದು ಹರಿವು ಹೆಚ್ಚಾಗುವಂತೆ ಮಾಡಿದೆ. ಇದರ ಜತೆಗೆ ಅಮೆರಿಕವು ನಿರಂತರವಾಗಿ ಕರೆನ್ಸಿ ಮುದ್ರಿಸುತ್ತಿದೆ. ಹೀಗಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ’ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಅವರು ತಿಳಿಸಿದ್ದಾರೆ.

‘ಭಾರತದ ಮಾರುಕಟ್ಟೆಯ ವಹಿವಾಟು ಸಕಾರಾತ್ಮವಾಗಿದ್ದು, ಉತ್ತಮ ಗಳಿಕೆ ತಂದುಕೊಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ವಿದೇಶಿ ಬಂಡವಾಳ ಹೂಡಿಕೆದಾರರು ಇಲ್ಲಿ ಹಣ ತೊಡಗಿಸುತ್ತಿದ್ದಾರೆ. ದೇಶಿ ಆರ್ಥಿಕತೆಯ ಚೇತರಿಕೆ ಮತ್ತು ವಾಣಿಜ್ಯ ವಹಿವಾಟುಗಳ ಮರು ಆರಂಭವೂ ಒಟ್ಟಾರೆ ಬೆಳವಣಿಗೆಗೆ ಸಕಾರಾತ್ಮಕ ಸೂಚನೆಯಾಗಿದೆ’ ಎಂದೂ ಹೇಳಿದ್ದಾರೆ.

‘ಭಾರತ ಮತ್ತು ಬ್ರೆಜಿಲ್‌ ಹೊರತುಪಡಿಸಿ, ಪ್ರವರ್ಧಮಾನಕ್ಕೆ ಬರುತ್ತಿರುವ ಉಳಿದೆಲ್ಲಾ ಮಾರುಕಟ್ಟೆಗಳಿಂದ ವಿದೇಶ ಬಂಡವಾಳ ಹಿಂತೆಗೆತ ಆಗಿದೆ. ಅಮೆರಿಕದ ಚುನಾವಣೆಯು ಎಫ್‌ಪಿಐ ಹೂಡಿಕೆಯ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ’ ಎಂದು ಗ್ರೋವ್‌ ಕಂಪನಿಯ ಸಹ ಸ್ಥಾಪಕ ಹರ್ಷ್ ಜೈನ್‌ ಅಭಿಪ್ರಾಯಪಟ್ಟಿದ್ದಾರೆ.

ಸಕಾರಾತ್ಮಕ ಅಂಶಗಳು

* ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುವರಿ ನಗದು

* ದೇಶಿದಲ್ಲಿ ಆರ್ಥಿಕ ಚಟುವಟಿಕೆಗಳ ಮರು ಆರಂಭ

* ಷೇರುಪೇಟೆಗಳಲ್ಲಿ ಉತ್ತಮ ಗಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.