ADVERTISEMENT

ಎಫ್‌ಪಿಐ ಹೊಂದಿರುವ ಷೇರು ಮೌಲ್ಯ ಶೇ 13ರಷ್ಟು ಹೆಚ್ಚಳ

ಪಿಟಿಐ
Published 19 ನವೆಂಬರ್ 2021, 15:42 IST
Last Updated 19 ನವೆಂಬರ್ 2021, 15:42 IST

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಹೊಂದಿರುವ ದೇಶಿ ಷೇರುಗಳ ಮೌಲ್ಯವು ಸೆಪ್ಟೆಂಬರ್‌ ತ್ರೈಮಾಸಿಕದ ಅಂತ್ಯದ ವೇಳೆಗೆ ₹ 49.35 ಲಕ್ಷ ಕೋಟಿಯಷ್ಟಾಗಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 13ರಷ್ಟು ಹೆಚ್ಚಾಗಿದೆ ಎಂದು ಮಾರ್ನಿಂಗ್‌ಸ್ಟಾರ್ ಕಂಪನಿಯ ವರದಿಯು ತಿಳಿಸಿದೆ.

ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಹೂಡಿಕೆದಾರರು ₹ 43.80 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದರು ಎಂದು ಹೇಳಿದೆ.

ದೇಶದ ಷೇರುಪೇಟೆಗಳಲ್ಲಿ ನಡೆಯುತ್ತಿರುವ ಉತ್ತಮ ವಹಿವಾಟು ಮತ್ತು ವಿದೇಶಿ ಬಂಡವಾಳದ ಒಳಹರಿವಿನಿಂದಾಗಿ ಹೂಡಿಕೆದಾರರ ಮೌಲ್ಯದಲ್ಲಿ ಈ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ತಿಳಿಸಿದೆ.

ADVERTISEMENT

ಸೆಪ್ಟೆಂಬರ್‌ ತ್ರೈಮಾಸಿಕದ ಅಂತ್ಯದ ವೇಳೆಗೆ ₹ 4,162 ಕೋಟಿ ಮೊತ್ತದ ವಿದೇಶಿ ಬಂಡವಾಳ ಹೂಡಿಕೆ ಆಗಿದೆ. ಜೂನ್‌ ತ್ರೈಮಾಸಿಕದ ಅಂತ್ಯದ ವೇಳೆಗೆ ಆಗಿದ್ದ ₹ 5,017 ಕೋಟಿ ಬಂಡವಾಳ ಹೂಡಿಕೆಗೆ ಹೋಲಿಸಿದರೆ ಇಳಿಕೆ ಆಗಿದೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌, ಬಡ್ಡಿದರ ಏರಿಕೆಯ ಸುಳಿವು ನೀಡಿರುವುದು ಹೂಡಿಕೆ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಒಳಹರಿವು ಕಡಿಮೆ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೋವಿಡ್‌ನ ಎರಡನೇ ಅಲೆಯ ಬಳಿಕ ಆರ್ಥಿಕ ಚೇತರಿಕೆ ಹಾಗೂ ಕಾರ್ಪೊರೇಟ್ ಗಳಿಕೆಯು ಇನ್ನಷ್ಟು ಸ್ಥಿರಗೊಳ್ಳುವ ಸೂಚನೆಗಾಗಿ ವಿದೇಶಿ ಹೂಡಿಕೆದಾರರು ಕಾಯುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವುದರಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.