ADVERTISEMENT

ಭಾರತ ತೊರೆಯುವುದಿಲ್ಲ: ಫ್ರ್ಯಾಂಕ್ಲಿನ್ ಟೆಂಪಲ್‌ಟನ್ ಸ್ಪಷ್ಟನೆ

ಪಿಟಿಐ
Published 26 ಜುಲೈ 2022, 12:17 IST
Last Updated 26 ಜುಲೈ 2022, 12:17 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಮುಂಬೈ: ಆಸ್ತಿ ನಿರ್ವಹಣಾ ಕಂಪನಿ ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ತಾನು ಭಾರತದಲ್ಲಿನ ವಹಿವಾಟು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದೇಶದಲ್ಲಿ ತನ್ನ ಬ್ರ್ಯಾಂಡ್‌ಅನ್ನು ಮತ್ತೆ ಕಟ್ಟುವುದಾಗಿ ಅದು ಹೇಳಿದೆ.

ಕಂಪನಿಯು 26 ವರ್ಷಗಳಿಂದ ಭಾರತದಲ್ಲಿ ವಹಿವಾಟು ನಡೆಸುತ್ತಿದೆ. ₹ 56 ಸಾವಿರ ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನಿರ್ವಹಿಸುತ್ತಿದೆ. 20 ಲಕ್ಷ ಹೂಡಿಕೆದಾರರು ಕಂಪನಿಯ ಮೂಲಕ ಹಣ ಹೂಡಿಕೆ ಮಾಡಿದ್ದಾರೆ ಎಂದು ಕಂಪನಿಯ ಭಾರತದ ಅಧ್ಯಕ್ಷ ಅವಿನಾಶ್ ಸತ್ವಾಲೇಕರ್ ಹೇಳಿದ್ದಾರೆ.

ಮೂರು ಲಕ್ಷ ಹೂಡಿಕೆದಾರರು ಹಣ ತೊಡಗಿಸಿದ್ದ ಆರು ಸಾಲ‍ಪತ್ರ ಆಧಾರಿತ ಮ್ಯೂಚುವಲ್‌ ಫಂಡ್‌ ಯೋಜನೆಗಳನ್ನು ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ 2020ರ ಏಪ್ರಿಲ್‌ನಲ್ಲಿ ಸಮಾಪ್ತಿಗೊಳಿಸುವ ತೀರ್ಮಾನ ಕೈಗೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು 2020ರ ನವೆಂಬರ್‌ನಲ್ಲಿ ಕಂಪನಿಗೆ ನೋಟಿಸ್ ಜಾರಿಗೊಳಿಸಿತ್ತು.

ಕಳೆದ ಎರಡು ವರ್ಷಗಳಲ್ಲಿ ಕಂಪನಿಯ ಬ್ರ್ಯಾಂಡ್‌ಗೆ ಧಕ್ಕೆಯಾಗಿದೆ ಎಂಬುದನ್ನು ಒಪ್ಪಿಕೊಂಡಿರುವ ಸತ್ವಾಲೇಕರ್ ಅವರು, ಬ್ರ್ಯಾಂಡ್‌ಅನ್ನು ಮತ್ತೆ ಗಟ್ಟಿಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮುಂದಿನ ಆರರಿಂದ ಹನ್ನೆರಡು ತಿಂಗಳುಗಳಲ್ಲಿ ಕಂಪನಿಯು ನಿರಂತರವಾಗಿ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.