ADVERTISEMENT

ಗಿಗ್‌ ಕಾರ್ಮಿಕರು ಅಂಚಿನಿಂದ ಮುಖ್ಯವಾಹಿನಿಗೆ: ತಜ್ಞರ ಅಭಿಪ್ರಾಯ

ಹೊಸದಾಗಿ ಜಾರಿಗೆ ಬಂದಿರುವ ಕಾರ್ಮಿಕ ಸಂಹಿತೆಗಳ ಬಗ್ಗೆ ತಜ್ಞರ ಅನಿಸಿಕೆ

ಪಿಟಿಐ
Published 22 ನವೆಂಬರ್ 2025, 15:35 IST
Last Updated 22 ನವೆಂಬರ್ 2025, 15:35 IST
<div class="paragraphs"><p>ಗಿಗ್‌ ಕಾರ್ಮಿಕರು</p></div>

ಗಿಗ್‌ ಕಾರ್ಮಿಕರು

   

ನವದೆಹಲಿ: ಹೊಸದಾಗಿ ಜಾರಿಗೆ ಬಂದಿರುವ ಕಾರ್ಮಿಕ ಸಂಹಿತೆಗಳು ದೇಶದ ಗಿಗ್ ಕಾರ್ಮಿಕರ ಪಾಲಿಗೆ ಐತಿಹಾಸಿಕ ಸುಧಾರಣೆಯಂತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಹಿತೆಗಳು ಗಿಗ್ ಕಾರ್ಮಿಕರನ್ನು ಕಾನೂನಿನ ಮಾನ್ಯತೆ ಹಾಗೂ ಸಾಮಾಜಿಕ ಭದ್ರತಾ ವ್ಯವಸ್ಥೆಯ ವ್ಯಾಪ್ತಿಗೆ ತರುತ್ತಿವೆ ಎಂದು ಅವರು ಹೇಳಿದ್ದಾರೆ.

ಸಮಾನ ಉದ್ಯೋಗ ಹಕ್ಕುಗಳು, ನೇಮಕಾತಿ ಪತ್ರ ನೀಡುವುದನ್ನು ಕಡ್ಡಾಯಗೊಳಿಸಿರುವುದು, ಪಿ.ಎಫ್‌, ಇಎಸ್‌ಐಸಿ ಮತ್ತು ವಿಮಾ ಸೌಲಭ್ಯ ಒದಗಿಸುವುದನ್ನು ಕಡ್ಡಾಯ ಮಾಡಿರುವುದು ಲಕ್ಷಾಂತರ ಮಂದಿ ಗಿಗ್ ಕಾರ್ಮಿಕರ ಪಾಲಿಗೆ ಸ್ಥಿರತೆಯನ್ನು ತರುವಂತಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಆದರೆ ಗಿಗ್ ಕೆಲಸಗಳ ಸ್ವರೂಪವು ಬದಲಾಗುತ್ತ ಇರುವ ಕಾರಣದಿಂದಾಗಿ ಹೊಸ ಸಂಹಿತೆಗಳ ಅನುಷ್ಠಾನವು ಸವಾಲುಗಳನ್ನು ಸೃಷ್ಟಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.

‘ಉದ್ಯೋಗದಾತ–ಉದ್ಯೋಗಿ ಎಂಬ ಸಂಬಂಧದ ವ್ಯಾಪ್ತಿಯಿಂದ ಮೊದಲಿನಿಂದಲೂ ಹೊರಗುಳಿದಿದ್ದ ಈ ಕಾರ್ಮಿಕರಿಗೆ ಕಾನೂನಿನ ಅಡಿ ಮಾನ್ಯತೆ ದೊರೆತಿದೆ. ಅವರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಲು ಒಂದು ಅಡಿಪಾಯ ಹಾಕಿದಂತಾಗಿದೆ’ ಎಂದು ಜೆಎಸ್‌ಎ ಅಡ್ವೊಕೇಟ್ಸ್‌ ಆ್ಯಂಡ್‌ ಸಾಲಿಸಿಟರ್ಸ್ ಸಂಸ್ಥೆಯ ಪ್ರೀತಾ ಎಸ್. ಹೇಳಿದ್ದಾರೆ.

ಗಿಗ್ ವ್ಯವಸ್ಥೆಯಲ್ಲಿನ ಪ್ರಮುಖ ಕಂಪನಿಗಳು ಹೊಸ ಸಂಹಿತೆಗಳನ್ನು ಸ್ವಾಗತಿಸಿವೆ. ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧವಿರುವುದಾಗಿ ಹೇಳಿವೆ. ‘ಕಾರ್ಮಿಕ ಸುಧಾರಣೆಗಳನ್ನು ಜಾರಿಗೊಳಿಸುವ ಸರ್ಕಾರದ ಉದ್ದೇಶವನ್ನು ನಾವು ಸ್ವಾಗತಿಸುತ್ತೇವೆ. ನಾವು ಜಾರಿಗೆ ತರಬೇಕಿರುವ ಬದಲಾವಣೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಅಮೆಜಾನ್‌ ಇಂಡಿಯಾ ಹೇಳಿದೆ.

‘ಪ್ರಗತಿಪರವಾದ ಈ ಹೆಜ್ಜೆಯನ್ನು ನಾವು ಸ್ವಾಗತಿಸುತ್ತೇವೆ, ಇದು ದೇಶದ ಉದ್ಯೋಗ ವ್ಯವಸ್ಥೆ ವಿಕಾಸ ಹೊಂದಿರುವುದನ್ನು ಗುರುತಿಸುತ್ತದೆ. ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸುವುದು ಮಹತ್ವದ್ದು’ ಎಂದು ರ್‍ಯಾಪಿಡೊ ಕಂಪನಿ ಹೇಳಿದೆ.

ಹೊಸ ಸಂಹಿತೆಗಳು ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳು ಸಿಗುವುದಕ್ಕೆ ಹೆಚ್ಚಿನ ಖಾತರಿ ಒದಗಿಸಲಿವೆ ಎಂದು ಎಟರ್ನಲ್‌ ಕಂಪನಿಯು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಹೇಳಿದೆ. ಹೊಸ ಸಂಹಿತೆಗಳಿಂದ ಆಗುವ ಹಣಕಾಸಿನ ಪರಿಣಾಮವು ಕಂಪನಿಗೆ ದೀರ್ಘಾವಧಿಯಲ್ಲಿ ನಷ್ಟವನ್ನೇನೂ ಮಾಡುವುದಿಲ್ಲ ಎಂದು ಹೇಳಿದೆ. ಎಟರ್ನಲ್‌ ಕಂಪನಿಯು ಜೊಮಾಟೊ ಮತ್ತು ಬ್ಲಿಂಕಿಟ್‌ನ ಮಾಲೀಕತ್ವ ಹೊಂದಿದೆ.

‘ಸಂಹಿತೆಗಳ ಕಾರಣದಿಂದಾಗಿ ನಮ್ಮ ಕಾರ್ಮಿಕರಿಗೆ ಹೆಚ್ಚಿನ ಮಟ್ಟದ ಸಾಮಾಜಿಕ ಭದ್ರತೆ ಸಿಗಲಿದೆ’ ಎಂದು ಜೆಪ್ಟೊ ಹೇಳಿದೆ. ಸಂಹಿತೆಗಳು ಉದ್ಯಮ ನಡೆಸುವುದನ್ನು ಸುಲಭವಾಗಿಸುತ್ತವೆ, ಗಿಗ್ ಕಾರ್ಮಿಕರನ್ನು ರಕ್ಷಿಸುತ್ತವೆ ಎಂದು ಅದು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.