ADVERTISEMENT

ದಿವಾಳಿ ಪ್ರಕ್ರಿಯೆ ತಪ್ಪಿಸಿಕೊಳ್ಳುವತ್ತ ಫ್ಯೂಚರ್‌ ಎಂಟರ್‌ಪ್ರೈಸಸ್‌

ವಿಮಾ ವಹಿವಾಟು ಮಾರಾಟದಿಂದ ₹ 3 ಸಾವಿರ ಕೋಟಿ ಸಂಗ್ರಹ ನಿರೀಕ್ಷೆ

ಪಿಟಿಐ
Published 8 ಮೇ 2022, 12:11 IST
Last Updated 8 ಮೇ 2022, 12:11 IST

ನವದೆಹಲಿ: ಫ್ಯೂಚರ್ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಕಂಪನಿಯು ತನ್ನ ಸಾಲವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ದಿವಾಳಿ ಪ್ರಕ್ರಿಯೆಯಿಂದ ಹೊರಬರುವ ಪ್ರಯತ್ನದಲ್ಲಿದೆ ಎಂದು ಮೂಲಗಳು ಹೇಳಿವೆ.

ಈ ಉದ್ದೇಶಕ್ಕಾಗಿ, ವಿಮಾ ವಹಿವಾಟಿನಲ್ಲಿ ಹೊಂದಿರುವ ಷೇರುಪಾಲಿನಲ್ಲಿ ಒಂದಷ್ಟನ್ನು ಮಾರಾಟ ಮಾಡಿ ₹ 3 ಸಾವಿರ ಕೋಟಿ ಸಂಗ್ರಹಿಸಲು ಮುಂದಾಗಿದೆ ಎಂದು ತಿಳಿಸಿವೆ.

ಕಂಪನಿಯು ಫ್ಯೂಚರ್‌ ಜನರಲಿ ಇಂಡಿಯಾ ಇನ್ಶುರೆನ್ಸ್‌ ಕಂಪನಿ ಲಿಮಿಟೆಡ್‌ನಲ್ಲಿ (ಎಫ್‌ಜಿಐಐಸಿಎಲ್‌) ಹೊಂದಿರುವ ಷೇರುಪಾಲಿನಲ್ಲಿ ಶೇ 25ರಷ್ಟನ್ನು ತನ್ನ ಜಂಟಿ ಪಾಲುದಾರ ಜನರಲಿ ಕಂಪನಿಗೆ ₹ 1,266 ಕೋಟಿಗೆಗುರುವಾರ ಮಾರಾಟ ಮಾಡಿದೆ. ಈ ಒಪ್ಪಂದ ಪೂರ್ಣಗೊಂಡ ಬಳಿಕ ‘ಎಫ್‌ಜಿಐಐಸಿಎಲ್‌’ನಲ್ಲಿ ಕಂಪನಿಯ ಷೇರುಪಾಲು ಶೇ 24.91ರಷ್ಟು ಉಳಿಯಲಿದೆ.

ADVERTISEMENT

ಮುಂದಿನ 30ರಿಂದ 40 ದಿನಗಳಲ್ಲಿ ಇನ್ನುಳಿದ ಷೇರುಗಳನ್ನೂ ₹ 1,250 ಕೋಟಿಗೆ ಮಾರಾಟ ಮಾಡಲಿದೆ. ಅಲ್ಲದೆ, ಫ್ಯೂಚರ್‌ ಜನರಲಿ ಇಂಡಿಯಾ ಲೈಫ್‌ ಇನ್ಶುರೆನ್ಸ್‌ ಕಂಪನಿ ಲಿಮಿಟೆಡ್‌ನ ಶೇ 33.3ರಷ್ಟು ಷೇರುಗಳನ್ನು ಸಹ ಮಾರಾಟ ಮಾಡುವ ಆಲೋಚನೆ ಹೊಂದಿದೆ ಎಂದು ಹೇಳಿವೆ.

ಪ್ರತ್ಯೇಕ ಒಪ್ಪಂದವೊಂದರಲ್ಲಿ ಜೀವ ವಿಮಾ ವಹಿವಾಟಿನ ಶೇ 33ರಷ್ಟು ಷೇರುಪಾಲನ್ನು ಜನರಲಿ ಕಂಪನಿಗೆ ಮತ್ತು ದೇಶದ ಇನ್ನೊಂದು ಕಂಪನಿಗೆ ₹ 400 ಕೋಟಿಗೆ ಮಾರಾಟ ಮಾಡಲಿದೆ. ಈ ಮೂಲಕ ಕಿಶೋರ್‌ ಬಿಯಾನಿ ನೇತೃತ್ವದ ಸಮೂಹ ಸಂಸ್ಥೆಯು ಸಂಪೂರ್ಣವಾಗಿ ವಿಮಾ ವಲಯದಿಂದ ಹೊರಬರಲಿದೆ ಎಂದು ಮೂಲಗಳು ತಿಳಿಸಿವೆ.

ಕಂಪನಿಯು ಮಾರ್ಚ್‌ 31ರ ಒಳಗೆ ₹ 2,911 ಕೋಟಿ ಸಾಲ ಮರುಪಾವತಿಸಲು ವಿಫಲವಾಗಿದೆ. ಕಂಪನಿಯ ಒಟ್ಟಾರೆ ಸಾಲವು ₹ 6,778 ಕೋಟಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.