ADVERTISEMENT

ಅಮೆಜಾನ್‌ ಗೊಂದಲ ಸೃಷ್ಟಿಸುತ್ತಿದೆ: ಬಿಯಾನಿ

ಫ್ಯೂಚರ್‌–ರಿಲಯನ್ಸ್‌ ಇಂಡಸ್ಟ್ರೀಸ್‌ ಒಪ್ಪಂದ

ಪಿಟಿಐ
Published 30 ಜನವರಿ 2021, 17:22 IST
Last Updated 30 ಜನವರಿ 2021, 17:22 IST
   

ನವದೆಹಲಿ: ‘ರಿಲಯನ್ಸ್‌ ಇಂಡಸ್ಟ್ರೀಸ್‌ ಜೊತೆಗಿನ ₹ 24,713 ಕೋಟಿ ಒಪ್ಪಂದದ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಟಿಸಲು ಅಮೆಜಾನ್‌ ಪ್ರಯತ್ನಿಸುತ್ತಿದೆ’ ಎಂದು ಫ್ಯೂಚರ್‌ ಗ್ರೂಪ್‌ನ ಪ್ರವರ್ತಕ ಕಿಶೋರ್‌ ಬಿಯಾನಿ ಆರೋಪಿಸಿದ್ದಾರೆ.

ಅಮೆಜಾನ್‌ನೊಂದಿಗಿನ ಬಿಕ್ಕಟ್ಟಿನ ಕುರಿತಾಗಿ ಸಿಬ್ಬಂದಿಗಳ ಆತಂಕ ದೂರ ಮಾಡಲು ಪ್ರಯತ್ನಿಸಿರುವ ಅವರು, ಸಂಸ್ಥೆಯು ಕಾನೂನು ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಒಪ್ಪಂದಕ್ಕೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ), ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಮಾರುಕಟ್ಟೆಯ ಅನುಮೋದನೆಯನ್ನೂ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಫ್ಯೂಚರ್‌ ಗ್ರೂಪ್‌ನ ರಿಟೇಲ್‌ ವಹಿವಾಟನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಮಾರಾಟ ಮಾಡುವುದನ್ನು ತಡೆಯುವಂತೆ ಹಾಗೂ ಬಿಯಾನಿ ಮತ್ತು ಅವರ ಕುಟುಂಬದ ಸದಸ್ಯರನ್ನು ಬಂಧಿಸುವಂತೆ ಅಮೆಜಾನ್ ಕಂಪನಿಯು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಬೆನ್ನಲ್ಲೇ ಬಿಯಾನಿ ಅವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಫ್ಯೂಚರ್ ಗ್ರೂಪ್‌ನ ಸಿಬ್ಬಂದಿಗೆ ಪತ್ರ ಬರೆದಿರುವ ಬಿಯಾನಿ ಅವರು, ‘ಅಮೆಜಾನ್‌ ಕಂಪನಿಯು ಸಂಘಟಿತ ಮಾಧ್ಯಮ ಅಭಿಯಾನ ನಡೆಸುತ್ತಿದ್ದು, ತಪ್ಪು ಮಾಹಿತಿಯನ್ನು ನೀಡುತ್ತಿದೆ’ ಎಂದಿದ್ದಾರೆ.

ಫ್ಯೂಚರ್ ಗ್ರೂಪ್ ಹೊಸ ರೀತಿಯ ದಾಳಿಯ ಗುರಿಯಾಗಿದೆ. ಭಾರತ ಗಣರಾಜ್ಯವಾದ 70 ವರ್ಷಗಳ ಬಳಿಕ ಭಾರತೀಯ ಗ್ರಾಹಕರ ಮೇಲೆ ಪ್ರಾಬಲ್ಯ ಸಾಧಿಸಲು ‘ಕಾರ್ಪೊರೇಟ್ ಸಮರ’ ನಡೆಸಲಾಗುತ್ತಿದೆ. ಭಾರತೀಯ ಸಮಾಜದ ಮನಸ್ಥಿತಿಯ ಮೇಲೆ ಪ್ರಭಾವ ಬೀರಲು ಅಪಾರ ಸಂಪನ್ಮೂಲಗಳನ್ನು ನಿಯೋಜಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಯಾವುದೇ ಬೆಲೆ ತೆತ್ತಾದರೂ ಭಾರತೀಯ ಗ್ರಾಹಕರ ಮೇಲೆ ಮಾಲೀಕತ್ವ ಸಾಧಿಸಬೇಕು ಎನ್ನುವ ಉದ್ದೇಶದಿಂದ ಸಮರ ಸಾರಲಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಅಮೆಜಾನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಅಮೆಜಾನ್‌ ತೆಗೆದುಕೊಂಡಿರುವ ಕಾನೂನು ಕ್ರಮಗಳ ವಿರುದ್ಧ ಬೆಂಬಲ ಸೂಚಿಸಿ, ಆತಂಕ ವ್ಯಕ್ತಪಡಿಸಿ ಹಲವು ಸಿಬ್ಬಂದಿ ಪತ್ರ ಬರೆದಿದ್ದಾರೆ. ಮೆಸೇಜ್‌, ಕರೆ ಮಾಡಿದ್ದಾರೆ’ ಎಂದು ಬಿಯಾನಿ ತಿಳಿಸಿದ್ದಾರೆ.

ಹಣಕಾಸು ಬಿಕ್ಕಟ್ಟು ಎದುರಾಗಿದ್ದರಿಂದ ರಿಟೇಲ್‌ ವಹಿವಾಟನ್ನು ರಿಲಯನ್ಸ್‌ಗೆ ಮಾರಾಟ ಮಾಡುತ್ತಿರುವುದಾಗಿ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.