ADVERTISEMENT

ತಗ್ಗಿದ ಜಿಡಿಪಿ ಕುಸಿತ ಪ್ರಮಾಣ

ಆರ್ಥಿಕ ಹಿಂಜರಿತಕ್ಕೆ ಜಾರಿದ ಭಾರತ l ತಯಾರಿಕಾ ವಲಯದಲ್ಲಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:02 IST
Last Updated 27 ನವೆಂಬರ್ 2020, 21:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವು ಸತತ ಎರಡು ತ್ರೈಮಾಸಿಕಗಳಲ್ಲಿಶೂನ್ಯಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಇದರಿಂದಾಗಿ ದೇಶವು ಆರ್ಥಿಕ ಹಿಂಜರಿತದ ಸ್ಥಿತಿಗೆ ಜಾರಿದಂತೆ ಆಗಿದೆ. ಏಪ್ರಿಲ್‌–ಜೂನ್‌ ತಿಂಗಳಲ್ಲಿ ದಾಖಲೆಯ ಶೇಕಡ (–)23.9ರಷ್ಟು ಕುಸಿತ ಕಂಡಿದ್ದ ಜಿಡಿಪಿ, ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಶೇಕಡ (–)7.5ರಷ್ಟು ಕುಸಿತ ಕಂಡಿದೆ.

ಕೋವಿಡ್–19 ಸಾಂಕ್ರಾಮಿಕ ಹರಡುವುದನ್ನು ತಡೆಯಲು ಹೇರಿದ್ದ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿದ ಪರಿಣಾಮವಾಗಿ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಕುಸಿತದ ಪ್ರಮಾಣ ಕಡಿಮೆ ಆಗಿದೆ ಎಂದು ವಿಶ್ಲೇಷಿಸಲಾಗಿದೆ.

ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಕೈಗಾರಿಕಾ ವಲಯದ ಬೆಳವಣಿಗೆ ದರವು ಶೂನ್ಯಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ವಲಯವು ಶೇಕಡ 0.6ರಷ್ಟು ಬೆಳವಣಿಗೆ ದಾಖಲಿಸಿದೆ. ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಸಾಧನೆಯು ಅಕ್ಟೋಬರ್‌ ತಿಂಗಳಲ್ಲಿ ಕಡಿಮೆ ಆಗಿರುವುದು ಈಗ ಕಂಡುಬಂದಿರುವ ಆರ್ಥಿಕ ಚೇತರಿಕೆ ಎಷ್ಟು ಸುಸ್ಥಿರ ಎಂಬ ಕಳವಳಕ್ಕೆ ಕಾರಣವಾಗಿದೆ.

ADVERTISEMENT

ಸಿಮೆಂಟ್, ಉಕ್ಕು, ವಿದ್ಯುತ್ ಮತ್ತು ಕಚ್ಚಾತೈಲ ಉದ್ಯಮ ವಲಯಗಳನ್ನು ಒಳಗೊಂಡಿರುವ ಮೂಲಸೌಕರ್ಯ ವಲಯವು ಅಕ್ಟೋಬರ್ ತಿಂಗಳಲ್ಲಿ ಶೇಕಡ (–)2.5ರಷ್ಟು ಬೆಳವಣಿಗೆ ಕಂಡಿದೆ. ಈ ವಲಯವು ಸೆಪ್ಟೆಂಬರ್‌ ತಿಂಗಳಲ್ಲಿ ಶೇಕಡ (–)0.1ರಷ್ಟು ಬೆಳವಣಿಗೆ ಕಂಡಿತ್ತು.

ಲಾಕ್‌ಡೌನ್‌ ಜಾರಿಯಲ್ಲಿದ್ದ ಅವಧಿಯಲ್ಲಿ ಉತ್ಪನ್ನ, ಸೇವೆಗಳನ್ನು ಪಡೆದುಕೊಳ್ಳಲಾಗದಿದ್ದವರಿಗೆ ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿನಲ್ಲಿಅವುಗಳನ್ನು ಪಡೆಯಲು ಸಾಧ್ಯವಾಯಿತು. ಇದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಡುಬಂದಿರುವ ಚೇತರಿಕೆಗೆ ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ.

ಕೃಷಿ ವಲಯವು ಈ ತ್ರೈಮಾಸಿಕದಲ್ಲಿ ಶೇಕಡ 3.4ರಷ್ಟು ಬೆಳವಣಿಗೆ ಸಾಧಿಸಿದೆ. ವಾಣಿಜ್ಯ ಮತ್ತು ಸೇವಾ ವಲಯವು ಶೇಕಡ (–)15.6ರಷ್ಟು ಕುಸಿತ ದಾಖಲಿಸಿದೆ. ಇದು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಕುಸಿತ. ಈ ತ್ರೈಮಾಸಿಕದಲ್ಲಿ ಸಾರ್ವಜನಿಕ ವೆಚ್ಚವು ಶೇಕಡ 12ರಷ್ಟು ಕಡಿಮೆ ಆಗಿತ್ತು ಎಂದು ಅಂಕಿ–ಅಂಶಗಳು ಹೇಳಿವೆ.

‘ಜಿಡಿಪಿ ಕುಸಿತದ ಪ್ರಮಾಣ ಕಡಿಮೆ ಆಗಿರುವುದನ್ನು ಇಂದಿನ ಅಂಕಿ–ಅಂಶಗಳು ಹೇಳುತ್ತಿವೆ. ಇದಕ್ಕೆ ಒಂದು ಕಾರಣ ಕೃಷಿ ವಲಯ ಕಂಡ ಬೆಳವಣಿಗೆ ಹಾಗೂ ತಯಾರಿಕಾ ವಲಯದಲ್ಲಿ ದಾಖಲಾಗಿರುವ ಸಣ್ಣ ಚೇತರಿಕೆ. ಆದರೆ, ನಿರ್ಮಾಣ, ಗಣಿಗಾರಿಕೆ ಮತ್ತು ಸೇವಾ ವಲಯಗಳಂತಹ ಉದ್ಯೋಗ ಸೃಷ್ಟಿಯ ಕ್ಷೇತ್ರಗಳಲ್ಲಿ ದೊಡ್ಡ ಚೇತರಿಕೆ ಕಂಡುಬಂದಿಲ್ಲ’ ಎಂದು ಎಲ್‌ಆ್ಯಂಡ್‌ಟಿ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಡಾ. ರೂಪಾ ಹೇಳಿದ್ದಾರೆ.

‘ಜಿಡಿಪಿ ಅಂಕಿ–ಅಂಶವು ನಿರೀಕ್ಷೆಗಿಂತ ಒಂಚೂರು ಹೆಚ್ಚು ಸಮಾಧಾನಕರವಾಗಿ ಇದೆ. ಡಿಸೆಂಬರ್‌ಗೆ ಕೊನೆಗೊಳ್ಳಲಿರುವ ತ್ರೈಮಾಸಿಕದಲ್ಲಿ ಇನ್ನಷ್ಟು ಹೆಚ್ಚಿನ ಬೆಳವಣಿಗೆ ಕಂಡುಬರಲಿದೆ’ ಎಂದು ಆನಂದ್ ರಾಠಿ ಸೆಕ್ಯುರಿಟೀಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಸುಜನ್ ಹಜ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.