ADVERTISEMENT

ಚೇತರಿಕೆ ಹಾದಿಯಲ್ಲಿ ಜಿಡಿಪಿ?

ಆರ್ಥಿಕ ವೃದ್ಧಿ ದರ ಶೇ 4.7 ಪ್ರಗತಿ

ಪಿಟಿಐ
Published 28 ಫೆಬ್ರುವರಿ 2020, 19:30 IST
Last Updated 28 ಫೆಬ್ರುವರಿ 2020, 19:30 IST

ನವದೆಹಲಿ : 2019ರ ಅಕ್ಟೋಬರ್‌ – ಡಿಸೆಂಬರ್‌ ಅವಧಿಯ ಮೂರನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 4.7ರಷ್ಟು ದಾಖಲಾಗಿದೆ.

ದೇಶಿ ಆರ್ಥಿಕತೆಯು ಕುಂಠಿತ ಪ್ರಗತಿಯಿಂದ ಹೊರ ಬಂದಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ ಎಂದು ಹಣಕಾಸು ಇಲಾಖೆಯು ಪ್ರತಿಕ್ರಿಯಿಸಿದೆ.

’ನಾವು ಈಗಾಗಲೇ ಮಂದಗತಿಯ ಬೆಳವಣಿಗೆಯ ಹಂತದಿಂದ ಹೊರ ಬಂದಿದ್ದೇವೆ. ಎಂಟು ಪ್ರಮುಖ ಮೂಲ ಸೌಕರ್ಯ ವಲಯಗಳಲ್ಲಿನ ಪ್ರಗತಿಯು ಕೂಡ ತಮ್ಮ ವಾದವನ್ನು ಸಮರ್ಥಿಸುತ್ತದೆ’ ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಅತನು ಚಕ್ರವರ್ತಿ ಹೇಳಿದ್ದಾರೆ.

ADVERTISEMENT

ವರ್ಷದ ಹಿಂದಿನ ಇದೇ ಅವಧಿಯಲ್ಲಿನ ‘ಜಿಡಿಪಿ’ಯು ಶೇ 5.6ರಷ್ಟಿತ್ತು ಎನ್ನುವುದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ.

ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ 9 ತಿಂಗಳ ಅವಧಿಯಲ್ಲಿ ಆರ್ಥಿಕ ಪ್ರಗತಿಯು ಶೇ 5.1ರಷ್ಟು ದಾಖಲಾಗಿದೆ. ವರ್ಷದ ಹಿಂದೆ ಈ ಬೆಳವಣಿಗೆ ದರ ಶೇ 6.3ರಷ್ಟಿತ್ತು.

ವೃದ್ಧಿ ದರ ಪರಿಷ್ಕರಣೆ: 2019–20ನೇ ಹಣಕಾಸು ವರ್ಷದ ಮೊದಲ ಮತ್ತು ದ್ವಿತೀಯ ತ್ರೈಮಾಸಿಕದ ವೃದ್ಧಿ ದರವನ್ನು ‘ಎನ್‌ಎಸ್‌ಒ’ ಕ್ರಮವಾಗಿ ಶೇ 5 ರಿಂದ ಶೇ 5.6ಕ್ಕೆ ಮತ್ತು ಶೇ 4.5ರಿಂದ ಶೇ 5.1ರಷ್ಟಕ್ಕೆ ಪರಿಷ್ಕರಿಸಿದೆ.

ಒಟ್ಟಾರೆ ವಾರ್ಷಿಕ ವೃದ್ಧಿ ದರವು ಶೇ 5ರಷ್ಟು ಇರಲಿದೆ ಎಂದು ಸೂಚಿಸಿದೆ. ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜಿಸಿರುವ (ಶೇ 5) ಮಟ್ಟದಲ್ಲಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.