ADVERTISEMENT

ಆರ್ಥಿಕ ವೃದ್ಧಿ ದರ ಕುಂಠಿತ

ಮೂರು ತ್ರೈಮಾಸಿಕಗಳಲ್ಲಿ ಅತಿ ಕಡಿಮೆ

ಪಿಟಿಐ
Published 1 ಡಿಸೆಂಬರ್ 2018, 2:08 IST
Last Updated 1 ಡಿಸೆಂಬರ್ 2018, 2:08 IST
   

ನವದೆಹಲಿ: ದೇಶಿ ಅರ್ಥ ವ್ಯವಸ್ಥೆಯು 2018–19ನೆ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಶೇ 7.1ರಷ್ಟು ವೃದ್ಧಿಯಾಗಿದೆ.

ಮೊದಲ ತ್ರೈಮಾಸಿಕದಲ್ಲಿ ಎರಡು ವರ್ಷಗಳ ಗರಿಷ್ಠ ವೃದ್ಧಿ ದರ ದಾಖಲಿಸಿದ್ದ ಜಿಡಿಪಿ, ಸರಕು ಮತ್ತು ಸೇವೆಗಳ ಸಾಧಾರಣ ಬೇಡಿಕೆ ಹಾಗೂ ಕೃಷಿ ವಲಯದ ನಿರಾಶಾದಾಯಕ ಪ್ರಗತಿಯ ಕಾರಣಕ್ಕೆ ಕುಸಿತಗೊಂಡಿದೆ.

ಮೂರು ತ್ರೈಮಾಸಿಕಗಳಲ್ಲಿನ ಅತಿ ಕಡಿಮೆ ಬೆಳವಣಿಗೆ ಇದಾಗಿದ್ದರೂ, ಚೀನಾದ ವೃದ್ಧಿ ದರಕ್ಕಿಂತ ಹೆಚ್ಚಿಗೆ ಇದೆ. ದ್ವಿತೀಯ ತ್ರೈಮಾಸಿಕದಲ್ಲಿ ಚೀನಾದ ವೃದ್ಧಿ ದರ ಶೇ 6.5ರಷ್ಟಿದೆ. ಭಾರತದ ಆರ್ಥಿಕತೆಯು ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿದೆ ಎನ್ನುವ ಹೆಗ್ಗಳಿಕೆ ಮುಂದುವರೆದಿದೆ.

ADVERTISEMENT

2011–12ರ ಸ್ಥಿರಬೆಲೆ ಆಧರಿಸಿದ ಒಟ್ಟು ಆಂತರಿಕ ಉತ್ಪನ್ನದ ಹೆಚ್ಚಳವು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 6.3ರಷ್ಟು ದಾಖಲಾಗಿತ್ತು.

ರೂಪಾಯಿ ಲೆಕ್ಕದಲ್ಲಿನ ಜಿಡಿಪಿಯ ಗಾತ್ರವು ವರ್ಷದ ಹಿಂದಿನ ₹ 31.72 ಲಕ್ಷ ಕೋಟಿಗೆ ಹೋಲಿಸಿದರೆ, ಈ ಬಾರಿ ₹ 33.98 ಕೋಟಿಗಳಷ್ಟಾಗಿ ಶೇ 7.1ರಷ್ಟು ಹೆಚ್ಚಳಗೊಂಡಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ತಿಳಿಸಿದೆ.

ವರ್ಷದ ಹಿಂದೆ ಶೇ 6.9ರಷ್ಟು ಬೆಳವಣಿಗೆ ಕಂಡಿದ್ದ ಗಣಿಗಾರಿಕೆ ಮತ್ತು ಕಲ್ಲು ಗಣಿ ವಲಯಗಳ ಬೆಳವಣಿಗೆ ಈ ಬಾರಿ ಶೇ 2.4ರಷ್ಟು ಕುಸಿತ ಕಂಡಿವೆ.

ತಯಾರಿಕಾ ವಲಯವು ವರ್ಷದ ಹಿಂದಿನ ಶೇ 7.1ಕ್ಕೆ ಹೋಲಿಸಿದರೆ ಈ ಬಾರಿ ಶೇ 7.4ಕ್ಕೆ ಏರಿಕೆಯಾಗಿದೆ. ಕಟ್ಟಡ ನಿರ್ಮಾಣ ವಲಯವೂ ಸುಧಾರಣೆ (ಶೇ 7.8) ಕಂಡಿದೆ.

ಕೃಷಿ ವಲಯವು, ವರ್ಷದ ಹಿಂದಿನ ಶೇ 2.6ಕ್ಕೆ ಹೋಲಿಸಿದರೆ, ಶೇ 3.8ರಷ್ಟು ಚೇತರಿಕೆ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.