ADVERTISEMENT

ಎಲ್‌ಐಸಿ ಐಪಿಒ: ಜಾಗತಿಕ ಬಿಕ್ಕಟ್ಟಿನಿಂದಾಗಿ ಷೇರು ಮಾರಾಟ ಪ್ರಮಾಣ ಇಳಿಕೆ

ಎಲ್‌ಐಸಿ ಐಪಿಒ ವಿಚಾರವಾಗಿ ರಾಹುಲ್ ಜೈನ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 15:41 IST
Last Updated 28 ಏಪ್ರಿಲ್ 2022, 15:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳ ಮಾರಾಟ ಪ್ರಮಾಣವನ್ನು ತಗ್ಗಿಸಿರುವುದಕ್ಕೆ ಒಂದು ಕಾರಣ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಎಂದು ಕೇಂದ್ರ ಸರ್ಕಾರದ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ನಿರ್ದೇಶಕ ರಾಹುಲ್ ಜೈನ್ ಹೇಳಿದರು.

ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಕುರಿತು ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಲ್‌ಐಸಿಯಲ್ಲಿನ ಶೇಕಡ 5ರಷ್ಟು ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡುವ ಆಲೋಚನೆಯನ್ನು ಕೇಂದ್ರವು ಈ ಮೊದಲು ಹೊಂದಿತ್ತು. ಆದರೆ, ಈಗ ಅದು ಶೇ 3.5ರಷ್ಟು ಷೇರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ಎಲ್‌ಐಸಿ ಐಪಿಒ ಪರಿಣಾಮವಾಗಿ ಸಣ್ಣ ಹೂಡಿಕೆದಾರರು ಇತರ ವಿಮಾ ಕಂಪನಿಗಳಲ್ಲಿ ಹೂಡಿಕೆಯಾಗಿರುವ ತಮ್ಮ ಹಣವನ್ನು ಹಿಂದಕ್ಕೆ ಪಡೆದು, ಅದನ್ನು ಎಲ್‌ಐಸಿಯಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ‘ಸಣ್ಣ ಪ್ರಮಾಣದಲ್ಲಿ ಆ ರೀತಿ ಆಗಬಹುದು. ಆದರೆ, ಅದು ದೊಟ್ಟ ಮಟ್ಟದಲ್ಲಿ ಆಗುವುದಿಲ್ಲ’ ಎಂದರು.

ADVERTISEMENT

ಎಲ್‌ಐಸಿ ಪ್ರತಿ ಷೇರಿಗೆ ನಿಗದಿ ಮಾಡಿರುವ ಬೆಲೆಯು (₹ 902–949) ಸಣ್ಣ ಹೂಡಿಕೆದಾರರ ಪಾಲಿಗೆ ಆಕರ್ಷಕವಾಗಿದೆ. ಅಲ್ಲದೆ, ಎಲ್‌ಐಸಿ ಪಾಲಿಸಿ ಹೊಂದಿರುವವರಿಗೆ ಹಾಗೂ ಇತರ ಸಣ್ಣ ಹೂಡಿಕೆದಾರರಿಗೆ ಷೇರು ಬೆಲೆಯಲ್ಲಿ ಸಿಗಲಿರುವ ರಿಯಾಯಿತಿಯೂ ಆಕರ್ಷಕವಾಗಿದೆ ಎಂದರು.

ಸಣ್ಣ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹ 45ರಷ್ಟು, ಪಾಲಿಸಿ ಹೊಂದಿರುವವರಿಗೆ ₹ 60ರಷ್ಟು ರಿಯಾಯಿತಿ ಇರಲಿದೆ ಎಂದು ಎಲ್‌ಐಸಿ ಹೇಳಿದೆ.

ಸಣ್ಣ ಹೂಡಿಕೆದಾರರಿಗೆ ಹಾಗೂ ಪಾಲಿಸಿ ಹೊಂದಿರುವವರಿಗೆ ಐಪಿಒ ಬಿಡ್ ಸಲ್ಲಿಸುವ ಸಂದರ್ಭದಲ್ಲಿಯೇ ರಿಯಾಯಿತಿಯ ಪ್ರಯೋಜನ ಲಭ್ಯವಾಗಲಿದೆ. ಷೇರುಗಳ ಹಂಚಿಕೆಯು ಮೇ 12ರಂದು ನಡೆಯಲಿದ್ದು, ಮೇ 17ರಂದು ಎಲ್‌ಐಸಿ ಷೇರುಗಳು ಷೇರುಪೇಟೆ ಪ್ರವೇಶಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.