ADVERTISEMENT

ದೇಶಿ ಚಿನ್ನ ಬೇಡಿಕೆ ಶೇ 35ರಷ್ಟು ಕುಸಿತ

11 ವರ್ಷಗಳ ಕನಿಷ್ಠ ಮಟ್ಟಕ್ಕೆ ಜಾಗತಿಕ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 13:14 IST
Last Updated 28 ಜನವರಿ 2021, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭಾರತದಲ್ಲಿ ಚಿನ್ನದ ಬೇಡಿಕೆಯು 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇಕಡ 35.34ರಷ್ಟು ಕುಸಿತ ಕಂಡಿದೆ. 2020ರಲ್ಲಿ ದೇಶದಲ್ಲಿ 446.4 ಟನ್‌ ಚಿನ್ನಕ್ಕೆ ಬೇಡಿಕೆ ಇತ್ತು ಎಂದು ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ಹೇಳಿದೆ.

2019ರಲ್ಲಿ ಚಿನ್ನದ ಬೇಡಿಕೆ 690.4 ಟನ್‌ಗಳಷ್ಟಿತ್ತು ಎಂದು ತನ್ನ ‘ಗೋಲ್ಡ್ ಡಿಮಾಂಡ್‌ ಟ್ರೆಂಡ್ಸ್’ ವರದಿಯಲ್ಲಿ ತಿಳಿಸಿದೆ.

ಡಬ್ಲ್ಯುಜಿಸಿಯ ಹಿರಿಯ ಮಾರುಕಟ್ಟೆ ವಿಮರ್ಶಕ ಮತ್ತು ಸಂಶೋಧಕ ಲೂಯಿಸ್ ಸ್ಟ್ರೀಟ್ ಅವರು ಗುರುವಾರ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ADVERTISEMENT

ಮೌಲ್ಯದ ಲೆಕ್ಕದಲ್ಲಿ ಬೇಡಿಕೆಯು ಶೇ 14ರಷ್ಟು ಇಳಿಕೆ ಆಗಿದ್ದು, ₹ 1,88,280 ಕೋಟಿಗಳಿಗೆ ತಲುಪಿದೆ. 2019ರಲ್ಲಿ ₹ 2,17,770 ಕೋಟಿಗಳಷ್ಟಿತ್ತು.

‘ಲಾಕ್‌ಡೌನ್‌, ಮಂದಗತಿಯ ಆರ್ಥಿಕ ಬೆಳವಣಿಗೆ ಮತ್ತು ಚಿನ್ನದ ಬೆಲೆ ಹೆಚ್ಚಾಗಿದ್ದರಿಂದ ಗ್ರಾಹಕರು ಚಿನ್ನ ಖರೀದಿಗೆ ಹೆಚ್ಚು ಆಸಕ್ತಿ ತೋರಲಿಲ್ಲ. ಇದರ ಪರಿಣಾಮ, ಚಿನ್ನಾಭರಣಗಳ ಬೇಡಿಕೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು ದಾಖಲಿಸುವಂತಾಗಿತ್ತು. 2021ರಲ್ಲಿಯೂಕೊರೊನಾ ಪರಿಣಾಮವು ಮುಂದುವರಿಯುವ ಸಾಧ್ಯತೆ ಇದೆ’ ಎಂದು ಲೂಯಿಸ್ ಸ್ಟ್ರೀಟ್ ಹೇಳಿದರು.

ದೇಶಿ ಚಿನ್ನ ಬೇಡಿಕೆಯ ದೀರ್ಘಾವಧಿಯ ಬೆಳವಣಿಗೆಗೆ 2021ನೇ ವರ್ಷವು ಕಾರಣವಾಗುವ ಸಾಧ್ಯತೆ ಇದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಬೇಡಿಕೆ ಚೇತರಿಕೆ ಕಂಡುಕೊಳ್ಳಲಿದ್ದು, ಆಮದು ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಜಾಗತಿಕ ಬೇಡಿಕೆ: 2020ರಲ್ಲಿ ಜಾಗತಿಕ ಮಟ್ಟದಲ್ಲಿ ಚಿನ್ನದ ಬೇಡಿಕೆಯು 11 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಡಬ್ಲ್ಯುಜಿಸಿ ಹೇಳಿದೆ.

ಕೋವಿಡ್‌–19 ಸಾಂಕ್ರಾಮಿಕ ಹಾಗೂ 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಬೇಡಿಕೆಯಲ್ಲಿ ಇಳಿಕೆಯ ಪರಿಣಾಮಗಳಿಂದಾಗಿ ಈ ಪ್ರಮಾಣದ ಕುಸಿತ ಆಗಿದೆ. 2009ರಲ್ಲಿ ಚಿನ್ನದ ಬೇಡಿಕೆಯು 3,385.8 ಟನ್‌ಗಳಷ್ಟಿತ್ತು. ಇದು 2020ರಲ್ಲಿ 3,759 ಟನ್‌ಗಳಿಗೆ ಅಂದರೆ 11 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. 2019ರಲ್ಲಿ 4,386 ಟನ್‌ಗಳಷ್ಟು ಚಿನ್ನಕ್ಕೆ ಬೇಡಿಕೆ ಇತ್ತು ಎಂದು ತಿಳಿಸಿದೆ.

ಬೇಡಿಕೆ ವಿವರ
ಚಿನ್ನಾಭರಣ;
42% ಇಳಿಕೆ
ಚಿನ್ನ ಆಮದು;47% ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.