ADVERTISEMENT

ಚಿನ್ನದ ಇಟಿಎಫ್‌: ನಿಲ್ಲದ ಹೊರಹರಿವು

ಪಿಟಿಐ
Published 1 ಫೆಬ್ರುವರಿ 2019, 20:27 IST
Last Updated 1 ಫೆಬ್ರುವರಿ 2019, 20:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸತತ ಆರನೇ ವರ್ಷದಲ್ಲಿಯೂಚಿನ್ನದ ವಿನಿಮಯ ವಹಿವಾಟು ನಿಧಿಗಳಿಂದ (ಇಟಿಎಫ್‌) ಬಂಡವಾಳ ಹೊರಹರಿವು ಮುಂದುವರಿದಿದೆ.

ಹೂಡಿಕೆದಾರರು 2018ರಲ್ಲಿ 14 ಚಿನ್ನದ ಇಟಿಎಫ್‌ಗಳಿಂದ ₹ 570 ಕೋಟಿಯನ್ನು ಹಿಂದಕ್ಕೆ ಪಡೆದಿದ್ದಾರೆ. 2017ರಲ್ಲಿ ಈ ಮೊತ್ತ ₹ 730 ಕೋಟಿ ಇತ್ತು.

ಚಿನ್ನದ ನಿಧಿಗಳ ನಿರ್ವಹಣೆಯಲ್ಲಿರುವ ಸಂಪತ್ತು ಮೌಲ್ಯ 2018ರಲ್ಲಿ ಶೇ 6ರಷ್ಟು ಕಡಿಮೆಯಾಗಿ ₹ 4,571 ಕೋಟಿಗೆ ಇಳಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟ ಮಾಹಿತಿ ನೀಡಿದೆ.

ADVERTISEMENT

ಚಿಲ್ಲರೆ ಹೂಡಿಕೆದಾರರು,ಕಳೆದ ಐದು ವರ್ಷಗಳಿಂದ ಚಿನ್ನದ ಇಟಿಎಫ್‌ಗಿಂತಲೂ ಷೇರುಗಳಲ್ಲಿ ಹೆಚ್ಚಿನ ಹಣ ತೊಡಗಿಸುತ್ತಿದ್ದಾರೆ. ಷೇರುಪೇಟೆಯಲ್ಲಿ ಉತ್ತಮ ಗಳಿಕೆ ಸಿಗುತ್ತಿರುವುದರಿಂದ ಅಲ್ಲಿ ಹೂಡಿಕೆಗೆ ಆಕರ್ಷಿತರಾಗಿದ್ದಾರೆ.

‘2018ರಲ್ಲಿ ರೂಪಾಯಿ ಮೌಲ್ಯದಲ್ಲಿನ ಇಳಿಕೆಯಿಂದ ದೇಶದಲ್ಲಿ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಆದರೆ, ಹೂಡಿಕೆದಾರರು ಚಿನ್ನವನ್ನು ಸಂಪತ್ತು ಸೃಷ್ಟಿಸುವ ಮಾರ್ಗವಾಗಿ ಪರಿಗಣಿಸುತ್ತಿಲ್ಲ’ ಎಂದು ಮಾರ್ನಿಂಗ್‌ಸ್ಟಾರ್‌ ಕಂಪನಿಯ ನಿರ್ದೇಶಕ ಕೌಸ್ತುಭ್‌ ಭೇಲ್‌ಪುರ್‌ಕರ್‌ ತಿಳಿಸಿದ್ದಾರೆ.

‘ಜಾಗತಿಕ ಮಟ್ಟದಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನದ ಮೀಸಲು ಸಂಗ್ರಹಕ್ಕೆ ಗಮನ ನೀಡುತ್ತಿವೆ. ಹೀಗಾಗಿ 2019ರ ದ್ವಿತೀಯಾರ್ಧದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಲಿದೆ’ ಎಂದು ಎಸೆಲ್‌ ಮ್ಯೂಚುವಲ್ ಫಂಡ್‌ನ ಸಿಐಒ ವಿರಲ್‌ ಬೆರವಾಲ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.