ADVERTISEMENT

₹100ಕ್ಕೂ ಖರೀದಿಸಬಹುದು ಚಿನ್ನ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2021, 15:11 IST
Last Updated 29 ಸೆಪ್ಟೆಂಬರ್ 2021, 15:11 IST
   

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕುಸಿದಿರುವ ಚಿನ್ನದ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದೇಶದಾದ್ಯಂತ ಹಲವು ಚಿನ್ನದ ವ್ಯಾಪಾರಿಗಳು ಆನ್‌ಲೈನ್ ಮೂಲಕ ಬಂಗಾರದ ಮಾರಾಟಕ್ಕೆ ಮುಂದಾಗಿದ್ದಾರೆ. ₹100ಗೂ ನೀವಿಲ್ಲಿ ಬಂಗಾರ ಖರೀದಿಸಬಹುದಾಗಿದೆ.

ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಕನಿಷ್ಠ ಹಣದಲ್ಲೂ ಚಿನ್ನ ಖರೀದಿಗೆ ಅವಕಾಶ ನೀಡಲಾಗಿದೆ.

ಟಾಟಾ ಗ್ರೂಪ್‌ನ ತನಿಷ್ಕ್,ಇಂಡಿಯಾ ಗೋಲ್ಡ್, ಆಗ್ಮಂಟ್ ಡಾಟ್ ಕಾಮ್, ಡಿಜಿ ಗೋಲ್ಡ್ ಸೇರಿದಂತೆ ಹಲವು ಆನ್‌ಲೈನ್ ತಾಣಗಳಲ್ಲಿ ₹100ಯಿಂದ ಹೂಡಿಕೆ ರೂಪದಲ್ಲಿ ನಿಜವಾದ ಚಿನ್ನ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ನಿರ್ದಿಷ್ಟ ಮೊತ್ತ(ಕನಿಷ್ಠ 1 ಗ್ರಾಂ ಚಿನ್ನಕ್ಕೆ ಆಗುವಷ್ಟು ಹಣ) ಹೂಡಿಕೆಯಾದ ಬಳಿಕ ಬೇಡಿಕ ಸಲ್ಲಿಸಿದರೆ ಗ್ರಾಹಕರಿಗೆ ಚಿನ್ನವನ್ನು ಡೆಲಿವರಿ ಮಾಡಲಾಗುತ್ತದೆ. ಅಥವಾ ಗ್ರಾಹಕರು ಬಯಸಿದರೆ ಅಲ್ಲಿಯೇ ಮಾರಾಟ ಮಾಡಬಹುದು. ಕುಟುಂಬದವರು ಮತ್ತು ಸ್ನೇಹಿತರಿಗೆ ಉಡುಗೊರೆಯಾಗಿ ನೀಡಲು ಸಹ ಈ ಡಿಜಿಟಲ್ ಗೋಲ್ಡ್ ಅನ್ನು ಬಳಸಬಹುದಾಗಿದೆ.

ADVERTISEMENT

ಡಿಜಿಟಲ್ ಚಿನ್ನದ ಮಾರಾಟವು ಭಾರತದಲ್ಲಿ ಹೊಸದೇನಲ್ಲ, ಮೊಬೈಲ್ ವ್ಯಾಲೆಟ್‌ಗಳು ಮತ್ತು ಆಗ್ಮಾಂಟ್ ಗೋಲ್ಡ್ ಫಾರ್ ಆಲ್, ವರ್ಲ್ಡ್ ಗೋಲ್ಡ್ ಕೌನ್ಸಿಲ್ ಬೆಂಬಲಿತ ಸೇಫ್‌ ಗೋಲ್ಡ್‌ನಂತಹ ಕಂಪನಿಗಳು ಚಿನ್ನ ಖರೀದಿಗೆ ಅವಕಾಶ ನೀಡುತ್ತಿವೆ. ಆದರೆ, ಆಭರಣ ವ್ಯಾಪಾರಿಗಳು ಮಾತ್ರ ಇಲ್ಲಿಯವರೆಗೆ ಅಂತಹ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದರಿಂದ ದೂರ ಉಳಿದಿದ್ದರು. ಭಾರತದಲ್ಲಿ ಹೆಚ್ಚಿನ ಜನರು ಈಗಲೂ ಅಂಗಡಿಗೇ ನೇರವಾಗಿ ಬಂದು ಖರೀದಿ ಮಾಡುತ್ತಿರುವುದರಿಂದ ಚಿನ್ನದ ಮಾರಾಟವನ್ನು ಅಂಗಡಿಗಳಿಗೆ ಸೀಮಿತಗೊಳಿಸಿದ್ದರು.

ಭಾರತದಲ್ಲಿ ಈಗ ಹಬ್ಬಗಳ ಸೀಸನ್ ಆರಂಭವಾಗಿದೆ. ಹಾಗಾಗಿ, ಬಂಗಾರ ಖರೀದಿಸುವ ಭಾರತೀಯರ ಪೃವೃತ್ತಿಯನ್ನು ಉತ್ತೇಜಿಸಲು ಕಂಪನಿಗಳು ಆನ್‌ಲೈನ್ ಮೂಲಕ ಕಡಿಮೆ ಹಣದಲ್ಲೂ ಚಿನ್ನ ಖರೀದಿಗೆ ಅವಕಾಶ ಕಲ್ಪಿಸುತ್ತಿವೆ.

ಆನ್‌ಲೈನ್ ಗೋಲ್ಡ್ ಖರೀದಿಗೆ ಗ್ರಾಹಕರು ಸಹ ಉತ್ಸಾಹ ತೋರಿದ್ದು, ಅಧಿಕ ಸಂಖ್ಯೆಯಲ್ಲಿ ಖರೀದಿ ನಡೆಯುತ್ತಿದೆ ಎನ್ನಲಾಗಿದೆ. ಅದರಲ್ಲೂ ಟೆಕ್ನಾಲಜಿಯಲ್ಲಿ ಮುಂದಿರುವ ಯುವಜನಾಂಗ ಹೆಚ್ಚು ಹೆಚ್ಚು ಆನ್‌ಲೈನ್ ಗೋಲ್ಡ್ ಖರೀದಿಗೆ ಮುಂದಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.