ADVERTISEMENT

ಚಿನ್ನ ಖರೀದಿಸುವುದೇ, ಬೇಡವೇ?

ವಿಶ್ವನಾಥ ಎಸ್.
Published 16 ಜುಲೈ 2019, 19:30 IST
Last Updated 16 ಜುಲೈ 2019, 19:30 IST
   

ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ಸದ್ಯ 10 ಗ್ರಾಂಗೆ ₹ 35 ಸಾವಿರದ ಆಸುಪಾಸಿನಲ್ಲಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಿವೆ ಮಾರುಕಟ್ಟೆ ಸಮೀಕ್ಷೆಗಳು. ಹಾಗಾದರೆ, ಬೆಲೆ ಏರಿಕೆಗೆ ಕಾಣಗಳೇನು? ಈ ಸಂದರ್ಭದಲ್ಲಿ ಚಿನ್ನ ಖರೀದಿಸಬಹುದೇ? ದರ ಇಳಿಕೆಯಾಗುವ ಸಂಭವ ಇದೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

ಮಧ್ಯಮವರ್ಗಕ್ಕೆ ಆಪತ್ಕಾಲದ ರಕ್ಷಕ ಚಿನ್ನ. ಕೈಯಲ್ಲಿ ಹಣ ಇಲ್ಲ ಎಂದಾಗ ತಕ್ಷಣಕ್ಕೆ ನೆರವಿಗೆ ಬರುತ್ತದೆ. ಬಳೆ, ಉಂಗುರ, ಸರ, ಕಿವಿಯೋಲೆ ಹೀಗೆ ಅಗತ್ಯಕ್ಕೆ ಅನುಗುಣವಾಗಿ ಯಾವುದಾದರೊಂದನ್ನು ಅಥವಾ ಎಲ್ಲವನ್ನೂ ಅಡವಿಟ್ಟು, ಮಾರಾಟ ಮಾಡಿ ಹಣ ಪಡೆಯುತ್ತೇವೆ.

ಮದುವೆ, ಮುಂಜಿಯಂತಹ ಸಮಾರಂಭಗಳಲ್ಲಿ ಚಿನ್ನಕ್ಕೆ ವಿಶೇಷ ಪ್ರಾಶಸ್ತ್ಯ ಇದೆ. ಬಡವರಾದರೂ ಇಂತಹ ಸಮಾರಂಭಗಳಲ್ಲಿ ಮೈಮೇಲೆ ಚಿನ್ನ ಇರಲೇಬೇಕು ಎಂದು ಸಾಲ ಮಾಡಿಯಾದರೂ ಖರೀದಿ ಮಾಡುತ್ತಾರೆ.

ADVERTISEMENT

ಸದ್ಯದ ಬೆಲೆಯನ್ನು ಗಮನಿಸಿದರೆ, ಚಿನ್ನ ಖರೀದಿಸಲು ಇದು ಸೂಕ್ತ ಸಮಯವೇ. ಬೆಲೆಯಲ್ಲಿ ಏನಾದರೂ ಕಡಿಮೆ ಆಗಬಹುದೇ. ಭವಿಷ್ಯದ ಅಗತ್ಯಕ್ಕಾಗಿ ಈಗ ಖರೀದಿಸುವುದಾದರೆ ಏನು ಮಾಡಬಹುದು. ಗಟ್ಟಿ ಚಿನ್ನ, ಚಿನ್ನಾಭರಣ ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನುವ ಇನ್ನೂ ಹಲವು ಪ್ರಶ್ನೆಗಳು ಮೂಡುತ್ತವೆ. ಬೆಲೆ ಪರಿಸ್ಥಿತಿಯು ದೀಪಾವಳಿಯವರೆಗೂ ಏರಿಕೆಯಾಗುತ್ತಲೇ ಇರುತ್ತದೆ ಎನ್ನುವುದು ಕೆಲವು ತಜ್ಞರ ಅಭಿಪ್ರಾಯವಾದರೆ, ಚಿನ್ನದ ಬೆಲೆ ಎತ್ತ ಸಾಗಲಿದೆ ಎನ್ನುವುದನ್ನು ಅಂದಾಜು ಮಾಡಲು ಸಾಧ್ಯವಿಲ್ಲ ಎಂದೂ ಕೆಲವರು ಹೇಳಿದ್ದಾರೆ.

‘ಚಿನ್ನಾಭರಣ ಮಾರುಕಟ್ಟೆ ಬಿದ್ದು ಹೋಗಿ ಎರಡು ವರ್ಷ ಆಗಿದೆ. ಮಾರಾಟದಲ್ಲಿ ಶೇ 50ರಷ್ಟು ಇಳಿಕೆ ಆಗಿದೆ. ಜನರ ಕೈಯಲ್ಲಿ ಹಣವೇ ಇಲ್ಲದಿರುವಾಗ ಖರೀದಿಸುವುದಾದೂ ಹೇಗೆ. ಜನರ ಕೈಯಲ್ಲಿ ಹಣ ಬಂದರೆ ಚಿನ್ನಾಭರಣ ಖರೀದಿ ಹೆಚ್ಚಾಗುತ್ತದೆ’ ಎಂದು ವರ್ತಕರೊಬ್ಬರು ಹೇಳಿದ್ದಾರೆ.

‘ಸುಂಕ ಏರಿಕೆಯಿಂದ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಚಿನ್ನದ ದರ ನಿರ್ಧಾರ ಆಗುವುದು ಲಂಡನ್‌ನಲ್ಲಿ ಅಲ್ಲವೇ ಎಂದು ಪ್ರಶ್ನಿಸುವ ಅವರು, ಸರ್ಕಾರಕ್ಕೆ ಒತ್ತಡ ತಂದರೆ ಸುಂಕದಲ್ಲಿ ಇಳಿಕೆ ಮಾಡಬಹುದು. ಆದರೆ, ಲಂಡನ್‌ ಮಾರುಕಟ್ಟೆಯಲ್ಲಿಯೇ ಚಿನ್ನದ ದರ ಏರಿಕೆಯಾದರೆ ಇಲ್ಲೂ ಅದರ ಪ್ರಭಾವ ಇರುತ್ತದೆ. ಚಿನ್ನದ ಬೆಲೆ ಎತ್ತ ಸಾಗಲಿದೆ ಎಂದು ಹೇಳುವುದು ಕಷ್ಟ’ ಎಂದು ಪರಿಸ್ಥಿತಿಯನ್ನು ವಿವರಿಸುತ್ತಾರೆ ಅವರು.

ಸುಂಕ ಏರಿಕೆಯಿಂದ ಬೆಲೆ ಹೆಚ್ಚಾಗಿದೆ

‘ಸುಂಕ ಏರಿಕೆ ಬಳಿಕ ಬೆಲೆಯು ತಲಾ 10 ಗ್ರಾಂಗೆ ₹ 6 ಸಾವಿರದವರೆಗೂ ಹೆಚ್ಚಾಗಿದೆ. ನಗದು ಬಿಕ್ಕಟ್ಟು, ತಗ್ಗಿದ ಬೇಡಿಕೆ ಇರುವುದರಿಂದ ಚಿನ್ನ ಬೇಡಿಕೆ ಕಳೆದುಕೊಂಡಿದೆ. ಬಜೆಟ್‌ ಹಿಂದಿನ ದಿನ 10 ಗ್ರಾಂಗೆ ₹ 33,700 ಇತ್ತು. ಬಜೆಟ್‌ನಲ್ಲಿ ಸುಂಕ ಏರಿಕೆ ನಿರ್ಧಾರ ಘೋಷಣೆಯಾದ ಬಳಿಕ ₹ 34,200ಕ್ಕೆ ಏರಿಕೆಯಾಗಿತ್ತು’ ಎಂದು ಮುಂಬೈ ಬುಲಿಯನ್‌ ಅಸೋಸಿಯೇಷನ್‌ ನಿರ್ದೇಶಕ ದಿನೇಶ್‌ ಪಾರೇಖ್ ತಿಳಿಸಿದ್ದಾರೆ.

‘ದೀಪಾವಳಿ ಹೊತ್ತಿ‌‌ಗೆ 10 ಗ್ರಾಂಗೆ ₹ 38 ಸಾವಿರದವರೆಗೂ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಹೇಳುತ್ತಾರೆ ಅವರು.

ಕಳ್ಳಸಾಗಣೆ ಹೆಚ್ಚಾಗಲಿದೆ

‘ಮುಂದಿನ ದಿನಗಳಲ್ಲಿ ಚಿನ್ನದ ಕಳ್ಳಸಾಗಣೆಯೇ ಹೆಚ್ಚಾಗಲಿದೆ. ಚಿನ್ನದ ಕಳ್ಳಸಾಗಣೆಯಲ್ಲಿ 75 ಟನ್‌ಗಳಿಂದ 80 ಟನ್‌ಗಳವರೆಗೆ ಏರಿಕೆಯಾಗಲಿದೆ. ಒಟ್ಟಾರೆ ಕಳ್ಳಸಾಗಣೆ ಪ್ರಮಾಣ 300 ಟನ್‌ಗಳಿಗೆ ತಲುಪುವ ಅಂದಾಜು ಮಾಡಲಾಗಿದೆ’ ದಿನೇಶ್‌ ಎಂದು ಅವರು ಹೇಳಿದ್ದಾರೆ.

‘ಆಮದು ಸುಂಕ ಏರಿಕೆಯಿಂದ ಉದ್ಯಮಗಳು ಬೇರೆ ದೇಶಗಳಿಗೆ ವಲಸೆ ಹೋಗುವ ಸಾಧ್ಯತೆ ಇದೆ’ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿಯ (ಜಿಜೆಇಪಿಸಿ) ಅಧ್ಯಕ್ಷ ಪ್ರಮೋದ್‌ ಅಗರ್‌ವಾಲ್‌ ಹೇಳಿದ್ದಾರೆ.

‘ಈಗಾಗಲೇ ಅಕ್ರಮವಾಗಿ ಚಿನ್ನ ಸಾಗಾಣಿಕೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಕಳ್ಳ ಸಾಗಾಣಿಕೆಯಲ್ಲಿ ಕನಿಷ್ಠ ಶೇ 30ರಷ್ಟು ಹೆಚ್ಚಳವಾಗಲಿದೆ’ ಎಂದು ಅಖಿಲ ಭಾರತ ಮುತ್ತು ಮತ್ತು ಆಭರಣಗಳ ಮಂಡಳಿ ಅಧ್ಯಕ್ಷ ಎನ್‌. ಅನಂತ ಪದ್ಮನಾಭನ್‌ ಹೇಳಿದ್ದಾರೆ.

ದರ ಏರಿಕೆಗೆ ಕಾರಣಗಳು ಹಲವು

‘ಅಮೆರಿಕ – ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರ ಮತ್ತು ಇರಾನ್‌ ಮತ್ತು ಅಮೆರಿಕ ಮಧ್ಯೆ ಮೂಡಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಚಿನ್ನದ ದರ ಇನ್ನಷ್ಟು ಏರಿಕೆಯಾಗಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಆರ್‌ಬಿಐ ಅನ್ನೂ ಒಳಗೊಂಡು ಎಲ್ಲಾ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಚಿನ್ನದ ಸಂಗ್ರಹವನ್ನು ಹೆಚ್ಚಿಸಿಕೊಂಡಿವೆ’ ಎಂದು ಇಂಡಿಯನ್‌ ಬುಲಿಯನ್‌ ಆ್ಯಂಡ್‌ ಜುವೆಲ್ಲರಿ ಅಸೋಸಿಯೇಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಹೇಳಿದ್ದಾರೆ.

‘ದೇಶದಲ್ಲಿ ಸದ್ಯ ಇರುವ ಹಣಕಾಸು ಬಿಕ್ಕಟ್ಟು ಮತ್ತು ವಿದೇಶಿ ಸಾಲ ಸಂಗ್ರಹ ಹೆಚ್ಚಿಸುವ ಸರ್ಕಾರದ ಉದ್ದೇಶದಿಂದ ರೂಪಾಯಿ ಮೌಲ್ಯ ಇನ್ನಷ್ಟು ದುರ್ಬಲವಾಗಲಿದೆ. ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಲಿದೆ.

ಚಿನ್ನದ ಬೇಡಿಕೆ ಮೇಲೆ ಪರಿಣಾಮ

ಆಮದು ಸುಂಕ ಹೆಚ್ಚಿಸಿರುವುದರಿಂದ 2019ರಲ್ಲಿ ಚಿನ್ನದ ಬೇಡಿಕೆ ಶೇ 2.4ರಷ್ಟು ಕಡಿಮೆಯಾಗಲಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಹೇಳಿದೆ.

ಗರಿಷ್ಠ ಸುಂಕದಲ್ಲಿ (ಶೇ 12.5) ಯಾವುದೇ ಬದಲಾವಣೆ ಆಗದೇ ಇದ್ದರೆ ದೀರ್ಘಾವಧಿಯಲ್ಲಿ ಚಿನ್ನದ ಬೇಡಿಕೆ ಶೇ 1ಕ್ಕಿಂತಲೂ ಕಡಿಮೆಯಾಗಲಿದೆ ಎಂದು ವಿಶ್ಲೇಷಣೆ ಮಾಡಿದೆ. ದುರ್ಬಲ ಆರ್ಥಿಕ ಪ್ರಗತಿ ಮತ್ತು ಚಿನ್ನದ ದರದಲ್ಲಿ ಏರಿಕೆಯಾಗುತ್ತಿರುವುದರಿಂದ ಈ ವರ್ಷ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಇದೆ.

ಹಣಕಾಸು ಮಾರುಕಟ್ಟೆಯ ಅಸ್ಥಿರತೆ ಮತ್ತು ಹೊಂದಾಣಿಕೆಯ ಹಣಕಾಸು ನೀತಿಯಿಂದಾಗಿ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಚಿನ್ನದ ಹೂಡಿಕೆಯು ಬೇಡಿಕೆ ಕಂಡುಕೊಳ್ಳಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.