ADVERTISEMENT

ಚಿನ್ನಾಭರಣ: ಕಂಪನಿಗಳ ಬೆಳವಣಿಗೆಗೆ ವೇಗ

ಐದು ವರ್ಷಗಳಲ್ಲಿ ಶೇ 40ಕ್ಕೂ ಅಧಿಕ ಮಾರುಕಟ್ಟೆ ಪಾಲು: ಡಬ್ಲ್ಯುಜಿಸಿ ಮಾಹಿತಿ

ವಿಶ್ವನಾಥ ಎಸ್.
Published 28 ಸೆಪ್ಟೆಂಬರ್ 2022, 22:42 IST
Last Updated 28 ಸೆಪ್ಟೆಂಬರ್ 2022, 22:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಚಿನ್ನಾಭರಣಗಳ ರಿಟೇಲ್‌ ಮಾರುಕಟ್ಟೆಯಲ್ಲಿ ತನಿಷ್ಕ್‌, ಮಲಬಾರ್‌ ಗೋಲ್ಡ್‌ನಂತಹ (ರಿಟೇಲ್‌ ಚೇನ್‌) ಕಂಪನಿಗಳು ಉತ್ತಮ ಬೆಳವಣಿಗೆ ಕಾಣುತ್ತಿವೆ. 2021ರಲ್ಲಿ ಶೇಕಡ 35ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದ ಇಂತಹ ರಿಟೇಲ್‌ ಚೇನ್ ಕಂಪನಿಗಳು ಇನ್ನು ಐದು ವರ್ಷಗಳಲ್ಲಿ ಶೇ 40ಕ್ಕಿಂತ ಹೆಚ್ಚಿನ ಪಾಲನ್ನು ಹೊಂದುವ ನಿರೀಕ್ಷೆ ಇದೆ.

ಮಾರುಕಟ್ಟೆಯ ಈಗಿನ ಬೆಳವಣಿಗೆಯನ್ನು ಗಮನಿಸಿದರೆ, ಪ್ರಮುಖ ಐದು ಕಂಪನಿಗಳು ಐದು ವರ್ಷಗಳಲ್ಲಿ 800ರಿಂದ 1 ಸಾವಿರ ಹೊಸ ಮಳಿಗೆಗಳನ್ನು ತೆರೆಯುವ ಸಾಧ್ಯತೆ ಇದೆ ಎಂದುವಿಶ್ವ ಚಿನ್ನ ಸಮಿತಿಯ (ಡಬ್ಲ್ಯುಜಿಸಿ) ವರದಿ ಹೇಳಿದೆ.

‘ಚಿನ್ನಾಭರಣದ ರಿಟೇಲ್‌ ಮಾರುಕಟ್ಟೆಯು ಕಳೆದ ಒಂದು ದಶಕದಲ್ಲಿ ಗುರುತಿಸಬಹುದಾದ ಹಲವು ಬದಲಾವಣೆಗಳಿಗೆ ತೆರೆದುಕೊಂಡಿದೆ. ಗ್ರಾಹಕರ ಆಯ್ಕೆಗಳು ಮತ್ತು ಸರ್ಕಾರದ ನಿಯಂತ್ರಣ ಕ್ರಮಗಳಿಂದಾಗಿ ಉದ್ಯಮವು ಹೆಚ್ಚು ಸಂಘಟಿತವಾಗಿದೆ’ ಎಂದು ಡಬ್ಲ್ಯುಜಿಸಿ ಭಾರತದ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿ.ಆರ್‌. ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಉತ್ತಮ ವಿನ್ಯಾಸ ಮತ್ತು ಗ್ರಾಹಕರ ಖರೀದಿ ಅನುಭವ ಸುಧಾರಿಸುವುದು, ಹಾಲ್‌ಮಾರ್ಕ್‌ ಬಗ್ಗೆ ಹೆಚ್ಚಾಗುತ್ತಿರುವ ಜಾಗೃತಿ ‌ಹಾಗೂ ಸ್ಪರ್ಧಾತ್ಮಕ ಬೆಲೆಯಿಂದಾಗಿ ರಿಟೇಲ್‌ ಮಳಿಗೆಗಳು ಉತ್ತಮ ಬೆಳವಣಿಗೆ ಕಂಡಿವೆ. ಈ ಮಳಿಗೆಗಳಲ್ಲಿನ ಒಟ್ಟಾರೆ ಮಾರಾಟದಲ್ಲಿ ನಿತ್ಯ ಬಳಸುವ, ಸರ ಮತ್ತು ಉಂಗುರದಂತಹ ಚಿನ್ನದ ಆಭರಣಗಳ ಪಾಲು ಶೇ50–60ರಷ್ಟು ಇದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಆನ್‌ಲೈನ್‌ ಮಾರಾಟ ಹೆಚ್ಚಳ: ಆನ್‌ಲೈನ್‌ ಮೂಲಕ ಚಿನ್ನಾಭರಣ ಮಾರಾಟವು ಕೆಲವು ವರ್ಷಗಳಿಂದ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಹೊಸ ತಲೆಮಾರಿನವರು (ಮಿಲೆನಿಯಲ್ಸ್‌) ಆನ್‌ಲೈನ್ ಮೂಲಕ ಚಿನ್ನ ಖರೀದಿಸಲು ಹೆಚ್ಚು ಆಸಕ್ತಿ ತೋರಿಸುತ್ತಿರುವುದೇ ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ.

18ರಿಂದ 45 ವರ್ಷ ವಯಸ್ಸಿನವರು ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್‌ ಮೂಲಕ ಖರೀದಿಸುತ್ತಿದ್ದಾರೆ. ಇವರು 5ರಿಂದ 10 ಗ್ರಾಂನಷ್ಟು ಚಿನ್ನಭರಣವನ್ನು ಖರೀದಿಸುತ್ತಿದ್ದಾರೆ.‌

ನಗದು ರೂಪದಲ್ಲೇ ಹೆಚ್ಚು ಖರೀದಿ: ದೇಶದಲ್ಲಿ ನಗದು ಪಾವತಿಸಿ ಚಿನ್ನ ಖರೀದಿಸುವ ಪ್ರವೃತ್ತಿಯೇ ಈಗಲೂ ಹೆಚ್ಚಿದೆ. ಚಿನ್ನಾಭರಣಗಳ ಮೌಲ್ಯದ ಆಧಾರದಲ್ಲಿ ಹೇಳುವುದಾದರೆ ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ನಗದು ಪಾವತಿಸಿ ಖರೀದಿಸುವ ಪ್ರಮಾಣ ಶೇ50–60ರಷ್ಟು, ಉಳಿದ ಕಡೆಗಳಲ್ಲಿ ಶೇ 70–80ರಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.