ADVERTISEMENT

ಡಿಜಿಟಲ್‌ ವಂಚನೆ: 2,200 ಸಾಲದ ಆ್ಯಪ್‌ಗಳಿಗೆ ಗೂಗಲ್‌ ಕೊಕ್

ಪಿಟಿಐ
Published 6 ಫೆಬ್ರುವರಿ 2024, 15:35 IST
Last Updated 6 ಫೆಬ್ರುವರಿ 2024, 15:35 IST
ಗೂಗಲ್‌
ಗೂಗಲ್‌   

ನವದೆಹಲಿ: ನಾಗರಿಕರಿಗೆ ಸಾಲದ ಆಮಿಷವೊಡ್ಡಿ ಡಿಜಿಟಲ್ ವಂಚನೆಯಲ್ಲಿ ತೊಡಗಿದ್ದ 2,200ಕ್ಕೂ ಹೆಚ್ಚು ಮೊಬೈಲ್‌ ಆ್ಯಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಎಂದು ಕೇಂದ್ರ ಸರ್ಕಾರವು, ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.

‘2022ರ ಸೆಪ್ಟೆಂಬರ್‌ನಿಂದ 2023ರ ಆಗಸ್ಟ್‌ವರೆಗೆ ನಡೆಸಿದ ಪರಿಶೀಲನೆಯಲ್ಲಿ ಹಣದ ವಂಚನೆಯಲ್ಲಿ ತೊಡಗಿದ್ದ ಈ ಆ್ಯಪ್‌ಗಳನ್ನು ಗೂಗಲ್‌ ಕಂಪನಿಯು ತೆಗೆದುಹಾಕಿದೆ’ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಭಾಗವತ್‌ ಕೆ. ಕರದ್ ಅವರು, ಸಂಸತ್‌ನ ಮೇಲ್ಮನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಾಹಿತಿ ಅನ್ವಯ, 2021ರ ಏಪ್ರಿಲ್‌ನಿಂದ 2022ರ ಜುಲೈವರೆಗೆ ಗೂಗಲ್‌ ಕಂಪನಿಯು 3,500ರಿಂದ 4,000 ಸಾಲದ ಆ್ಯಪ್‌ಗಳ ಪರಿಶೀಲನೆ ನಡೆಸಿತ್ತು. ಈ ಅವಧಿಯಲ್ಲಿ 2,500ಕ್ಕೂ ಹೆಚ್ಚು ಸಾಲದ ಆ್ಯಪ್‌ಗಳನ್ನು ತೆಗೆದುಹಾಕಿದೆ ಎಂದು ವಿವರಿಸಿದ್ದಾರೆ.

ADVERTISEMENT

ಜನರ ಹಿತದೃಷ್ಟಿಯಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಾಗೂ ಮಧ್ಯಸ್ಥಿಕೆದಾರರ ಕೋರಿಕೆ ಮೇರೆಗೆ ಕೇಂದ್ರವು ವಂಚನೆ ಆ್ಯಪ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಸಾಲದ ಆ್ಯಪ್‌ಗಳು ದುಬಾರಿ ಬಡ್ಡಿ ವಿಧಿಸುವ ಮೂಲಕ ಜನರ  ಶೋಷಣೆಯಲ್ಲಿ ತೊಡಗಿವೆ. ಹಾಗಾಗಿ, ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವುದಕ್ಕೆ ಚೌಕಟ್ಟು ರೂಪಿಸಲು ಆರ್‌ಬಿಐ ಕಠಿಣ ಮಾರ್ಗಸೂಚಿಗಳನ್ನು ರೂಪಿಸಿದೆ. ಸಾಲ ವಸೂಲಾತಿ ವೇಳೆ ಅಕ್ರಮ ಮಾರ್ಗ ಅನುಸರಿಸುವುದನ್ನು ನಿಯಂತ್ರಿಸಲು ಇದರಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದ್ದಾರೆ. 

2021ರ ಏ‍ಪ್ರಿಲ್‌ನಿಂದ 2023ರ ಆಗಸ್ಟ್‌ ವರೆಗೆ 4,700ಕ್ಕೂ ಹೆಚ್ಚು ಸಾಲದ ಆ್ಯಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.