ನವದೆಹಲಿ: ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಸೋಮವಾರ ಅನುಮತಿ ನೀಡಿದೆ.
ದೇಶೀಯ ಬೆಲೆಗಳನ್ನು ಸ್ಥಿರಗೊಳಿಸಲು ಮತ್ತು ಉದ್ಯಮಕ್ಕೆ ನೆರವು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
‘5 ಕೋಟಿ ರೈತ ಕುಟುಂಬಗಳು ಮತ್ತು 5 ಲಕ್ಷ ಕಾರ್ಮಿಕರಿಗೆ ಇದರ ಲಾಭ ದೊರೆಯಲಿದೆ’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳಿಗೆ ನಗದು ಹರಿವನ್ನು ಹೆಚ್ಚಿಸಲಿದೆ. ಇದರಿಂದ ನಿಗದಿತ ಸಮಯಕ್ಕೆ ಕಬ್ಬಿನ ಬಾಕಿ ಪಾವತಿಸಬಹುದು. ಜೊತೆಗೆ ಲಭ್ಯತೆಯನ್ನು ಹೆಚ್ಚಿಸಲಿದ್ದು, ದರ ಏರಿಕೆಯನ್ನು ನಿಯಂತ್ರಿಸಲಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಸೆಪ್ಟೆಂಬರ್ 30ರ ವರೆಗೆ ಮಿಲ್‌ಗಳು ನೇರವಾಗಿ ಅಥವಾ ವ್ಯಾಪಾರಿಗಳ ಮೂಲಕ ಸಕ್ಕರೆ ರಫ್ತು ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘವು (ಐಎಸ್‌ಬಿಎಂಎ) ಸರ್ಕಾರದ ಈ ಆದೇಶವನ್ನು ಸ್ವಾಗತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.