ADVERTISEMENT

ಒಪ್ಪಿಗೆ ಇಲ್ಲದೆ ಮೊಬೈಲ್‌ ಸಂಖ್ಯೆ ಪಡೆಯುವಂತಿಲ್ಲ: ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ

ಪಿಟಿಐ
Published 30 ಮೇ 2023, 15:52 IST
Last Updated 30 ಮೇ 2023, 15:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರಕುಗಳ ಮಾರಾಟ ಅಥವಾ ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ ಗ್ರಾಹಕರ ಅನುಮತಿ ಇಲ್ಲದೆ ಅವರ ಮೊಬೈಲ್‌ ದೂರವಾಣಿ ಸಂಖ್ಯೆ ಪಡೆದುಕೊಳ್ಳಬಾರದು ಎಂದು ರಿಟೇಲ್‌ ವರ್ತಕರಿಗೆ ಸೂಚಿಸುವಂತೆ ಕೇಂದ್ರವು ಉದ್ಯಮ ಸಂಘಟನೆಗಳಿಗೆ ಹೇಳಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಈ ಸಂಬಂಧ ಈಚೆಗೆ ಸಿಐಐ, ಫಿಕ್ಕಿ, ಅಸೋಚಾಂ, ಭಾರತೀಯ ರಿಟೇಲರ್‌ಗಳ ಒಕ್ಕೂಟ ಮತ್ತು ಅಖಿಲ ಭಾರತ ವರ್ತಕರ ಒಕ್ಕೂಟಕ್ಕೆ (ಸಿಎಐಟಿ) ಪತ್ರ ಬರೆದಿದ್ದಾರೆ.

‘ಮಾರಾಟ ಸಂದರ್ಭದಲ್ಲಿ ಗ್ರಾಹಕರ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಅವರ ಒಪ್ಪಿಗೆಯಿಲ್ಲದೆ ಪಡೆಯುವಂತಿಲ್ಲ ಎಂದು ರಿಟೇಲ್ ವರ್ತಕರಿಗೆ ಸೂಕ್ತ ಸಲಹೆ ನೀಡಬೇಕು. ಮೊಬೈಲ್‌ ದೂರವಾಣಿ ಸಂಖ್ಯೆ ನೀಡುವುದು ಕಡ್ಡಾಯವಾಗಬಾರದು’ ಎಂದು ಮೇ 26ರಂದು ಬರೆದಿರುವ ಪತ್ರದಲ್ಲಿ ಸಿಂಗ್ ಹೇಳಿದ್ದಾರೆ.

ADVERTISEMENT

ಹಲವು ರಿಟೇಲ್ ಮಳಿಗೆಗಳು ತಮ್ಮ ಗ್ರಾಹಕರಿಗೆ ಮೊಬೈಲ್ ಸಂಖ್ಯೆ ಸಲ್ಲಿಸಲು ಒತ್ತಾಯಿಸುತ್ತಿವೆ ಎಂಬ ದೂರುಗಳು ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ಬಂದಿವೆ ಎಂದು ಸಿಂಗ್ ಹೇಳಿದ್ದಾರೆ. ಮೊಬೈಲ್ ಸಂಖ್ಯೆ ಕೊಡಲು ಒಪ್ಪದ ಗ್ರಾಹಕರಿಗೆ ಉತ್ಪನ್ನ ಮಾರಾಟ ಮಾಡಲು ನಿರಾಕರಿಸಿದ ಪ್ರಸಂಗಗಳೂ ಇವೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಮೊಬೈಲ್ ಸಂಖ್ಯೆ ಕೊಟ್ಟ ನಂತರದಲ್ಲಿ ಗ್ರಾಹಕರಿಗೆ ಮಾರ್ಕೆಟಿಂಗ್ ಮತ್ತು ಪ್ರಚಾರ ಉದ್ದೇಶದ ಎಸ್‌ಎಂಎಸ್‌ಗಳು ಬರುತ್ತಿವೆ. ಇವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ‘ವಸ್ತುವನ್ನು ಮಾರಾಟ ಮಾಡುವಾಗ ಮೊಬೈಲ್‌ ಸಂಖ್ಯೆ ಬೇಕೇಬೇಕು ಎನ್ನುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಮತ್ತು ನ್ಯಾಯಸಮ್ಮತವಲ್ಲದ ಕೆಲಸ’ ಎಂದು ಸಿಂಗ್ ಎಚ್ಚರಿಸಿದ್ದಾರೆ.

ಗ್ರಾಹಕರು ಮೊಬೈಲ್ ಸಂಖ್ಯೆ ಕೊಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ಅವರಿಗೆ ಉತ್ಪನ್ನ ಮರಳಿಸಲು, ಬೇರೊಂದು ಉತ್ಪನ್ನದೊಂದಿಗೆ ವಿನಿಮಯ ಮಾಡಿಕೊಳ್ಳಲು ನಿರ್ಬಂಧಿಸುವುದು, ಅವರಿಗೆ ಹಣ ಮರಳಿಸಲು ನಿರಾಕರಿಸುವುದು ಅಥವಾ ದೂರುಗಳನ್ನು ಇತ್ಯರ್ಥ ಮಾಡದೆ ಇರುವುದು ಕೂಡ ಅಕ್ರಮ ಎಂದು ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.