ADVERTISEMENT

ಸಕ್ಕರೆ ರಫ್ತು ನಿರ್ಬಂಧ 2023ರ ಅಕ್ಟೋಬರ್‌ವರೆಗೂ ವಿಸ್ತರಣೆ

ಪಿಟಿಐ
Published 29 ಅಕ್ಟೋಬರ್ 2022, 10:08 IST
Last Updated 29 ಅಕ್ಟೋಬರ್ 2022, 10:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಕ್ಕರೆ ರಫ್ತು ಮೇಲೆ ವಿಧಿಸಿರುವ ನಿರ್ಬಂಧವನ್ನುಕೇಂದ್ರ ಸರ್ಕಾರ ಮುಂದಿನ ವರ್ಷದ ಅಕ್ಟೋಬರ್‌ 31ರವರೆಗೆ ವಿಸ್ತರಿಸಿದೆ.

ದೇಶಿಯವಾಗಿ ಅಗತ್ಯ ಪ್ರಮಾಣದ ಸಕ್ಕರೆ ಲಭ್ಯತೆ ಇರುವಂತೆ ನೋಡಿಕೊಳ್ಳುವುದು, ಬೆಲೆ ಏರಿಕೆಗೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ. ಈ ಹಿಂದೆ ವಿಧಿಸಿದ್ದ ನಿರ್ಬಂಧವು ಇದೇ 31ಕ್ಕೆ ಅಂತ್ಯವಾಗಲಿರುವುದರಿಂದ ಮತ್ತೆ ನಿರ್ಬಂಧವನ್ನು ವಿಸ್ತರಣೆ ಮಾಡಲಾಗಿದೆ.

‘ಸಕ್ಕರೆ ರಫ್ತು ನಿಷೇಧವು 2022ರ ಅಕ್ಟೋಬರ್‌ 31 ರಿಂದ 2023ರ ಅಕ್ಟೋಬರ್‌ 31ರವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ’ ಎಂದು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ADVERTISEMENT

ಆದರೆ ಸಿಎಕ್ಸ್‌ಎಲ್‌ ಮತ್ತು ಟಿಆರ್‌ಕ್ಯೂ ಕೋಟಾದಡಿ ಅಮೆರಿಕ ಮತ್ತು ಯೂರೋಪ್‌ ಒಕ್ಕೂಟದ ದೇಶಗಳಿಗೆ ಮಾಡುವ ಸಕ್ಕರೆ ರಪ್ತಿಗೆಈ ನಿರ್ಬಂಧ ಅನ್ವಯ ಆಗುವುದಿಲ್ಲ ಎಂದು ಡಿಜಿಎಫ್‌ಟಿ ಸ್ಪಷ್ಟಪಡಿಸಿದೆ.

ಸಕ್ಕರೆ ಉತ್ಪಾದನೆ, ದೇಶಿ ಬಳಕೆ, ರಫ್ತು ಹಾಗೂ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯ ಕುರಿತು ಸರ್ಕಾರವು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ.

ಪ್ರಸಕ್ತ ವರ್ಷದಲ್ಲಿ ಭಾರತವು ಅತಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆ ಮಾಡಿದ್ದು, ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಸಕ್ಕರೆ ಉತ್ಪಾದನೆಯು 2022–23ನೇ ಮಾರುಕಟ್ಟೆ ವರ್ಷದಲ್ಲಿ 3.65 ಕೋಟಿ ಟನ್‌ಗೆ ತಲುಪುವ ಅಂದಾಜು ಮಾಡಲಾಗಿದೆ. ಹಿಂದಿನ ಮಾರುಕಟ್ಟೆ ವರ್ಷಕ್ಕೆ ಹೋಲಿಸಿದರೆ ಶೇ 2ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. 2021–22ನೇ ಮಾರುಕಟ್ಟೆ ವರ್ಷದಲ್ಲಿ 3.58 ಕೋಟಿ ಟನ್‌ ಸಕ್ಕರೆ ಉತ್ಪಾದನೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.