ADVERTISEMENT

ತೈಲ ಕಂಪನಿಗಳಿಗೆ ನೆರವು ಕಡಿತ

ಪಿಟಿಐ
Published 26 ಜನವರಿ 2024, 15:27 IST
Last Updated 26 ಜನವರಿ 2024, 15:27 IST
   

ನವದೆಹಲಿ: ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಉತ್ತೇಜನ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರವು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಲ್ಲಿ ಈಕ್ಟಿಟಿ ರೂಪದಲ್ಲಿ ಹೂಡಿಕೆ ಮಾಡುವ ಮೊತ್ತವನ್ನು ಅರ್ಧದಷ್ಟು ತಗ್ಗಿಸಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕಳೆದ ವರ್ಷದ ಫೆಬ್ರುವರಿಯಲ್ಲಿ ಮಂಡಿಸಿದ್ದ 2023–24ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ತೈಲ ಕಂಪನಿಗಳಲ್ಲಿ ಈಕ್ವಿಟಿ ರೂಪದಲ್ಲಿ ₹30 ಸಾವಿರ ಕೋಟಿ ಹೂಡಿಕೆ ಮಾಡುವ ಬಗ್ಗೆ ಘೋಷಿಸಲಾಗಿತ್ತು. ಇದರಿಂದ ಭಾರತೀಯ ತೈಲ ನಿಗಮ, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಮತ್ತು ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ಗೆ ನೆರವಾಗಿತ್ತು. ಸದ್ಯ ಈ ಮೊತ್ತವನ್ನು ₹15 ಸಾವಿರ ಕೋಟಿಗೆ ಇಳಿಸಲಾಗಿದೆ ಎಂದು ‘ಎಕ್ಸ್‌’ನಲ್ಲಿ ಸಚಿವಾಲಯ ತಿಳಿಸಿದೆ.

ನಿಗದಿಪಡಿಸಿದ ಮೊತ್ತದಲ್ಲಿ ಅರ್ಧದಷ್ಟು ಕಡಿತ ಮಾಡುವ ಸಂಬಂಧ 2023ರ ನವೆಂಬರ್‌ 30ರಂದು ನಡೆದ ಹಣಕಾಸು ವೆಚ್ಚದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ನಿರ್ದಿಷ್ಟ ಕಾರಣವನ್ನು ಸಚಿವಾಲಯವು ಬಹಿರಂಗಪಡಿಸಿರಲಿಲ್ಲ.

ADVERTISEMENT

ತೈಲ ಪೂರೈಕೆಯಲ್ಲಿ ಎದುರಾಗುವ ತೊಂದರೆ ತಪ್ಪಿಸಲು ಕರ್ನಾಟಕದ ಮಂಗಳೂರು ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದ ಆಯಕಟ್ಟಿನ ಸ್ಥಳದಲ್ಲಿ ತೈಲ ಶೇಖರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಘಟಕಗಳಲ್ಲಿ ಶೇಖರಣೆಗಾಗಿ ಕಚ್ಚಾ ತೈಲ ಖರೀದಿಸಲು ₹5,000 ಕೋಟಿ ಮೊತ್ತದ ಪ್ರಸ್ತಾವವನ್ನು ಸಿದ್ಧಪಡಿಸಲಾಗಿತ್ತು. ತೈಲ ಮಾರುಕಟ್ಟೆಯಲ್ಲಿನ ಪ್ರಸಕ್ತ ಬೆಳವಣಿಗೆಗಳನ್ನು ಆಧರಿಸಿ ಈ ಪ್ರಸ್ತಾವವನ್ನೂ ಮುಂದೂಡಲಾಗಿದೆ ಎಂದು ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.