ADVERTISEMENT

ಗೋಧಿ ಮೇಲಿನ ಎಂಎಸ್‌ಪಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 14:40 IST
Last Updated 18 ಅಕ್ಟೋಬರ್ 2023, 14:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಗೋಧಿ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) 2024–25ನೇ ಮಾರುಕಟ್ಟೆ ಅವಧಿಗೆ ಕ್ವಿಂಟಲ್‌ಗೆ ₹150ರಷ್ಟು ಹೆಚ್ಚಳ ಮಾಡಿದೆ. ಇದರಿಂದಾಗಿ ಗೋಧಿ ಮೇಲಿನ ಎಂಎಸ್‌ಪಿ ಕ್ವಿಂಟಲ್‌ಗೆ ₹2,275ಕ್ಕೆ ಏರಿಕೆ ಆಗಿದೆ.

ಗೋಧಿ ಬೆಳೆಯುವ ಮಧ್ಯಪ್ರದೇಶ, ರಾಜಸ್ಥಾನದಂತಹ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಬೆನ್ನಲ್ಲೇ ಕೇಂದ್ರವು ಈ ನಿರ್ಧಾರ ತೆಗೆದುಕೊಂಡಿದೆ.

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಮಾರುಕಟ್ಟೆ ಅವವಧಿಯೊಂದರಲ್ಲಿ ಎಂಎಸ್‌ಪಿಯಲ್ಲಿ ಆಗಿರುವ ಗರಿಷ್ಠ ಏರಿಕೆ ಇದಾಗಿದೆ. 2017-18, 2018-19, 2019-20 ಮತ್ತು 2023-24ರ ಅವಧಿಯಲ್ಲಿ ಕ್ವಿಂಟಲ್‌ಗೆ ₹100 ರಿಂದ ₹110ರವರೆಗೆ ಹೆಚ್ಚಳ ಮಾಡಲಾಗಿದೆ. ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದೆ.

ADVERTISEMENT

2023–24ನೇ ಮಾರುಕಟ್ಟೆ ಅವಧಿಗೆ (ಏಪ್ರಿಲ್‌–ಮಾರ್ಚ್‌) ಗೋಧಿಗೆ ಕ್ವಿಂಟಲ್‌ಗೆ ₹2,125 ರಷ್ಟು ಎಂಎಸ್‌ಪಿ ಇದೆ.

ಹಿಂಗಾರು ಅವಧಿಯಲ್ಲಿ ಬೆಳೆಯುವ 6 ಬೆಳೆಗಳ ಮೇಲಿನ ಎಂಎಸ್‌ಪಿ ಹೆಚ್ಚಿಸಲು ಸಮಿತಿಯು ಒಪ್ಪಿಗೆ ನೀಡಿದೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಕಡಲೆಕಾಳು, ಬಾರ್ಲಿ, ಚೆನ್ನಂಗಿ ಬೇಳೆ (ಮಸೂರ್), ಸಾಸಿವೆ ಮತ್ತು ಕುಸುಬೆ ಮೇಲಿನ ಎಂಎಸ್‌ಪಿಯನ್ನೂ ಹೆಚ್ಚಿಸಲಾಗಿದೆ.

2023–24ನೇ ಬೆಳೆ ವರ್ಷದಲ್ಲಿ (ಜುಲೈ–ಜೂನ್) 11.4 ಕೋಟಿ ಟನ್‌ ಗೋಧಿ ಉತ್ಪಾದನೆ ಆಗುವ ಅಂದಾಜನ್ನು ಕೃಷಿ ಸಚಿವಾಲಯ ಮಾಡಿದೆ. 2022–23ರ ಅವಧಿಯಲ್ಲಿ ₹11.26 ಲಕ್ಷ ಟನ್‌ ಉತ್ಪಾದನೆ ಅಗಿತ್ತು. ಸಚಿವಾಲಯದ ಪ್ರಕಾರ, ಗೋಧಿ ಬಿತ್ತನೆಗೆ ಸಾಕಷ್ಟು ಬೀಜ ಪೂರೈಕೆ ಆಗಿದೆ.

ಎಂಎಸ್‌ಪಿ ವಿವರ (ಕ್ವಿಂಟಲ್‌ಗೆ)

ಬೆಳೆ;2023–24;2024–25;ಏರಿಕೆ

ಗೋಧಿ;₹2,125;₹2,275;150

ಬಾರ್ಲಿ;₹1,735;₹1,850;115

ಸಾಸಿವೆ;₹5,450;₹5,650;₹200

ಚೆನ್ನಂಗಿ ಬೇಳೆ;₹6,000;₹6,425;₹425

ಕುಸುಬೆ; ₹5,650;₹5,800;₹150

ಗೋಧಿ ದರ ಏರಿಕೆ
ಮುಂಬೈ (ರಾಯಿಟರ್ಸ್‌): ಹಬ್ಬದ ಋತುವಿನ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗದೇ ಇರುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು 8 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.  ದೆಹಲಿಯಲ್ಲಿ ಗೋಧಿ ಬೆಲೆಯು ಶೇ 1.6ರಷ್ಟು ಹೆಚ್ಚಾಗಿ ಟನ್‌ಗೆ ₹27390ಕ್ಕೆ ತಲುಪಿದೆ. ಫೆಬ್ರುವರಿ 10ರ ನಂತರದ ಗರಿಷ್ಠ ದರ ಇದಾಗಿದೆ. ಕಳೆದ ಆರು ತಿಂಗಳಿನಲ್ಲಿ ದರವು ಶೇ 22ರಷ್ಟು ಹೆಚ್ಚಾಗಿದೆ. ಹಬ್ಬದ ಬೇಡಿಕೆಯು ಗೋಧಿ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಬೆಲೆ ಕಡಿಮೆ ಆಗಬೇಕಾದರೆ ಸರ್ಕಾರವು ಸುಂಕ ಇಲ್ಲದೇ ಆಮದು ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ರೋಲರ್‌ ಫ್ಲೋರ್‌ ಮಿಲ್ಲರ್ಸ್‌ ಫೆಡರೇಷನ್‌ನ ಅಧ್ಯಕ್ಷ ಪ್ರಮೋದ್ ಕುಮಾರ್‌ ಎಸ್‌. ಹೇಳಿದ್ದಾರೆ. ಗೋಧಿ ಆಮದು ಸುಂಕವು ಸದ್ಯ ಶೇ 40ರಷ್ಟು ಇದೆ. ಸದ್ಯದ ಮಟ್ಟಿಗೆ ಸರ್ಕಾರವು ಆಮದು ಸುಂಕ ಕೈಬಿಡುವ ಸಾಧ್ಯತೆ ಇಲ್ಲ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಕಳೆದ ತಿಂಗಳು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.