ADVERTISEMENT

ಆಕಸ್ಮಿಕ ಲಾಭ ತೆರಿಗೆ ಹೆಚ್ಚಿಸಿದ ಕೇಂದ್ರ

ಪಿಟಿಐ
Published 3 ಜನವರಿ 2023, 13:04 IST
Last Updated 3 ಜನವರಿ 2023, 13:04 IST
   

ನವದೆಹಲಿ: ದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲ ಹಾಗೂ ಡೀಸೆಲ್ ಮತ್ತು ವಿಮಾನ ಇಂಧನದ (ಎಟಿಎಫ್) ರಫ್ತಿನ ಮೇಲೆ ವಿಧಿಸುವ ಆಕಸ್ಮಿಕ ಲಾಭ ತೆರಿಗೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಾಗುತ್ತಿರುವ ಕಾರಣ ತೆರಿಗೆ ಜಾಸ್ತಿ ಮಾಡಲಾಗಿದೆ.

ಒಎನ್‌ಜಿಸಿ ಮತ್ತು ಅದರಂತಹ ಕಂಪನಿಗಳು ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ ₹ 2,100ಕ್ಕೆ ಹೆಚ್ಚಿಸಲಾಗಿದೆ. ಅದು ಈವರೆಗೆ ₹ 1,700 ಆಗಿತ್ತು.

ಡೀಸೆಲ್‌ ರಫ್ತಿನ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಪ್ರತಿ ಲೀಟರ್‌ಗೆ ₹ 6.5ಕ್ಕೆ ಹೆಚ್ಚಿಸಲಾಗಿದೆ. ಅದು ಲೀಟರ್‌ಗೆ ₹ 5 ಆಗಿತ್ತು. ಎಟಿಎಫ್‌ ಮೇಲಿನ ಆಕಸ್ಮಿಕ ಲಾಭ ತೆರಿಗೆಯು ಲೀಟರ್‌ಗೆ ₹ 4.5ಕ್ಕೆ ಹೆಚ್ಚಳವಾಗಿದೆ. ತೆರಿಗೆ ಹೆಚ್ಚಳವು ಮಂಗಳವಾರದಿಂದ ಜಾರಿಗೆ ಬಂದಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಕಡಿಮೆ ಆಗಿದ್ದ ಕಾರಣ ಡಿಸೆಂಬರ್‌ 16ರಂದು ಆಕಸ್ಮಿಕ ಲಾಭ ತೆರಿಗೆಯನ್ನು ತಗ್ಗಿಸಲಾಗಿತ್ತು. ಅದಾದ ನಂತರದಲ್ಲಿ ಕಚ್ಚಾ ತೈಲ ಬೆಲೆಯು ಹೆಚ್ಚಳ ಕಂಡಿದೆ.

ಕೇಂದ್ರವು ಮೊದಲಿಗೆ ಜುಲೈ 1ರಂದು ಆಕಸ್ಮಿಕ ಲಾಭ ತೆರಿಗೆ ವಿಧಿಸಿತ್ತು. ಆಗ ಪೆಟ್ರೋಲ್‌ ಮತ್ತು ಎಟಿಎಫ್‌ ರಫ್ತಿಗೆ ಲೀಟರಿಗೆ ತಲಾ ₹ 6 ತೆರಿಗೆ ವಿಧಿಸಲಾಗಿತ್ತು. ಡೀಸೆಲ್‌ಗೆ ಲೀಟರಿಗೆ ₹ 13 ತೆರಿಗೆ ವಿಧಿಸಲಾಗಿತ್ತು. ದೇಶಿ ಕಚ್ಚಾ ತೈಲ ಉತ್ಪಾದನೆಯ ಮೇಲೆ ಪ್ರತಿ ಟನ್‌ಗೆ ₹ 23,250 ತೆರಿಗೆ ವಿಧಿಸಲಾಯಿತು. ಅದಾದ ನಂತರದಲ್ಲಿ ಪೆಟ್ರೋಲ್ ರಫ್ತಿನ ಮೇಲಿನ ತೆರಿಗೆಯನ್ನು ರದ್ದು ಮಾಡಲಾಗಿದೆ.

ಆಕಸ್ಮಿಕ ಲಾಭ ತೆರಿಗೆ ದರವನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ ಹಾಗೂ ನಯಾರಾ ಎನರ್ಜಿ ದೇಶದಿಂದ ಇಂಧನ ರಫ್ತು ಮಾಡುವ ಪ್ರಮುಖ ಕಂಪನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.