ನವದೆಹಲಿ: ಆನ್‌ಲೈನ್ ಶಾಪಿಂಗ್ ಅಥವಾ ಡಿಜಿಟಲ್ ಮಾರುಕಟ್ಟೆಯಿಂದ ಗ್ರಾಹಕರಿಗೆ ಆಗುತ್ತಿರುವ ವಂಚನೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಇ–ಕಾಮರ್ಸ್ ವೇದಿಕೆಗಳ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕರಡು ಮಾರ್ಗಸೂಚಿ ಪ್ರಕಟಿಸಿದೆ.
ಗ್ರಾಹಕರು ಹಾಗೂ ಸಂಘ–ಸಂಸ್ಥೆಗಳಿಂದ ಫೆಬ್ರುವರಿ 15ರ ವರೆಗೆ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.
‘ಇ–ಕಾಮರ್ಸ್‌ನ ಮೂಲತತ್ವಗಳು ಮತ್ತು ಸ್ವಯಂ ಆಡಳಿತ’ ಕುರಿತ ಈ ಮಾರ್ಗಸೂಚಿಗಳನ್ನು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಭಾರತೀಯ ಪ್ರಮಾಣೀಕರಣ ಸಂಸ್ಥೆಯು (ಬಿಐಎಸ್) ಸಿದ್ಧಪಡಿಸಿದೆ.
ಗ್ರಾಹಕರ ರಕ್ಷಣೆ ಮತ್ತು ನಂಬಿಕೆಗೆ ಅನುಗುಣವಾಗಿ ಇ–ಕಾಮರ್ಸ್ ವಹಿವಾಟು ನಡೆಯಬೇಕು. ಅಲ್ಲದೆ, ಇಂತಹ ವೇದಿಕೆಗಳಲ್ಲಿ ಸ್ವಯಂ ಆಡಳಿತದ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ವಹಿವಾಟಿಗೂ ಮುಂಚೆ, ಗ್ರಾಹಕರ ಸಂಪರ್ಕ ಹಾಗೂ ವಹಿವಾಟಿನ ನಂತರದ ಪ್ರಕ್ರಿಯೆ ಎಂಬ ಮೂರು ಹಂತದ ಚೌಕಟ್ಟು ರೂಪಿಸಲಾಗಿದೆ.
ಇ–ಕಾಮರ್ಸ್ ವೇದಿಕೆಗಳಲ್ಲಿ ತಯಾರಕರು ಅಥವಾ ಮಾರಾಟಗಾರರು (ಥರ್ಡ್ ಪಾರ್ಟಿ) ತಮ್ಮ ಸರಕುಗಳ ಮಾರಾಟಕ್ಕೆ ಅವಕಾಶವಿದೆ. ಇಂತಹವರೊಂದಿಗೆ ವೇದಿಕೆಗಳು ಕೆವೈಸಿ ಪೂರ್ಣಗೊಳಿಸಬೇಕು ಎಂದು ಹೇಳಲಾಗಿದೆ.
ಅಲ್ಲದೆ ಅವರ ಸಂಪರ್ಕದ ವಿವರ ಮತ್ತು ಗುರುತಿನ ನಂಬರ್ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಆಮದು ಮಾಡಿಕೊಂಡ ಸರಕುಗಳ ಬಗ್ಗೆಯೂ ವಿವರ ಪ್ರಕಟಿಸಬೇಕು. ಆಮದುದಾರ, ಪ್ಯಾಕರ್, ಮಾರಾಟಗಾರರು ಮತ್ತು ಅವರ ಸಂಪರ್ಕದ ವಿವರವನ್ನೂ ನಮೂದಿಸಬೇಕಿದೆ.
ಗ್ರಾಹಕರ ಒಪ್ಪಿಗೆ, ವಹಿವಾಟಿನ ಪರಿಶೀಲನೆಗೆ ಅನುವು ಮಾಡಿಕೊಡಬೇಕು. ಸರಕುಗಳ ರದ್ದತಿ, ಹಿಂದಿರುಗಿಸುವಿಕೆ ಮತ್ತು ಮರುಪಾವತಿಯಲ್ಲಿ ಪಾರದರ್ಶಕ ನಿಯಮಗಳನ್ನು ಅನುಸರಿಸಬೇಕಿದೆ.
ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಅವುಗಳನ್ನು ಗ್ರಾಹಕರಿಗೂ ಲಭ್ಯವಾಗಿಸಬೇಕು. ಕ್ರೆಡಿಟ್/ ಡೆಬಿಟ್ ಕಾರ್ಡ್, ಮೊಬೈಲ್ ಪಾವತಿ ವ್ಯವಸ್ಥೆ, ಇ–ವ್ಯಾಲೆಟ್ ಹೀಗೆ ಗ್ರಾಹಕರಿಗೆ ಎಲ್ಲಾ ರೀತಿಯ ಪಾವತಿ ವಿಧಾನಕ್ಕೆ ಅವಕಾಶ ಕಲ್ಪಿಸಬೇಕು. ಸಂಸ್ಕರಣ ಶುಲ್ಕದ ಬಗ್ಗೆ ವಿವರವಾಗಿ ತಿಳಿಸಬೇಕಿದೆ.
ಸಕಾಲದಲ್ಲಿ ವಿತರಣೆ ಕಡ್ಡಾಯ ಸುರಕ್ಷಿತ ಪಾವತಿ ವ್ಯವಸ್ಥೆಗೆ ಎರಡು ಹಂತದ ದೃಢೀಕರಣ ಮಾಡಬೇಕು. ಉತ್ಪನ್ನವು ಕೈಗೆ ಸಿಕ್ಕಿದ ಬಳಿಕ ಹಣ ಪಾವತಿಸುವ ಆಯ್ಕೆಯನ್ನು (ಕ್ಯಾಶ್ ಆನ್ ಡೆಲಿವರಿ) ಗ್ರಾಹಕರ ಆದ್ಯತೆ ಪ್ರಕಾರವೇ ಜಾರಿಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸಕಾಲದಲ್ಲಿ ಹಣ ಮರುಪಾವತಿ ಮತ್ತು ಸರಕುಗಳ ಬದಲಾವಣೆಗೆ ಹೆಚ್ಚುವರಿ ಅವಕಾಶ ನೀಡಬೇಕಿದೆ. ಸರಕುಗಳನ್ನು ಇ–ಕಾಮರ್ಸ್ ವೇದಿಕೆಗಳಿಂದ ಆಂತರಿಕವಾಗಿ ಅಥವಾ ಥರ್ಡ್ ಪಾರ್ಟಿ ಪೂರೈಕೆದಾರರಿಂದ ನಿರ್ವಹಣೆ ಮಾಡಿದ್ದರೂ ಗ್ರಾಹಕರಿಗೆ ಸಕಾಲದಲ್ಲಿ ವಿತರಿಸಬೇಕಿದೆ. ನಿಷೇಧಿತ ಸರಕುಗಳು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.