ADVERTISEMENT

ದೇಶೀ ಆ್ಯಪ್‌ ಸ್ಟೋರ್‌ಗೆ ಸರ್ಕಾರ ಉತ್ಸುಕ: ರವಿಶಂಕರ್‌ ಪ್ರಸಾದ್‌

ಪಿಟಿಐ
Published 18 ಮಾರ್ಚ್ 2021, 21:55 IST
Last Updated 18 ಮಾರ್ಚ್ 2021, 21:55 IST
ಕೇಂದ್ರ ಐ.ಟಿ. ಸಚಿವ ರವಿಶಂಕರ್‌ ಪ್ರಸಾದ್
ಕೇಂದ್ರ ಐ.ಟಿ. ಸಚಿವ ರವಿಶಂಕರ್‌ ಪ್ರಸಾದ್   

ನವದೆಹಲಿ: ಖಾಸಗಿ ಕಂಪನಿಗಳಿಗೆ ಆ್ಯಪ್‌ಗಳನ್ನು ಹೋಸ್ಟ್‌ ಮಾಡಲು ಉತ್ತೇಜನ ನೀಡುವ ಜೊತೆಗೆ ಸರ್ಕಾರವು ತನ್ನ ಮೊಬೈಲ್‌ ಆ್ಯಪ್‌ ಸ್ಟೋರ್‌ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು ಉತ್ಸುಕವಾಗಿದೆ ಎಂದು ಕೇಂದ್ರ ಐ.ಟಿ. ಸಚಿವ ರವಿಶಂಕರ್‌ ಪ್ರಸಾದ್‌ ರಾಜ್ಯಸಭೆಗೆ ತಿಳಿಸಿದ್ದಾರೆ.

ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಆ್ಯಪ್‌ಸ್ಟೋರ್ ‘ಮೊಬೈಲ್‌ ಸೇವಾ ಆ್ಯಪ್‌ಸ್ಟೋರ್‌’ನಲ್ಲಿ ವಿವಿಧ ವಿಭಾಗಗಳ 965ಕ್ಕೂ ಹೆಚ್ಚಿನ ಆ್ಯಪ್‌ಗಳಿವೆ ಎಂದು ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಈ ಆ್ಯಪ್‌ ಸ್ಟೋರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಟೋರ್‌ಅನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಬಯಸುತ್ತದೆ ಎಂದು ತಿಳಿಸಿದ್ದಾರೆ.

ದೇಶವು ಸ್ವಂತ ಡಿಜಿಟಲ್‌ ಅಪ್ಲಿಕೇಷನ್‌ ಸ್ಟೋರ್‌ ಹೊಂದಿಲ್ಲದ ಕಾರಣ, ಡಿಜಿಟಲ್‌ ಸೇವೆಗಳಿಗಾಗಿ ಗೂಗಲ್‌ ಮತ್ತು ಆ್ಯಪಲ್‌ ಮೇಲೆ ಅವಲಂಬಿಸಲಾಗಿದೆ. ಇದರಿಂದ ಡಿಜಿಟಲ್‌ ವ್ಯವಸ್ಥೆಗಳಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿದೆಯೇ, ಸರ್ಕಾರ ಮತ್ತು ಖಾಸಗಿ ಆ್ಯಪ್‌ಗಳಿಗೆ ಒಂದೇ ಅಥವಾ ಪ್ರತ್ಯೇಕ ಡಿಜಿಟಲ್ ಆ್ಯಪ್ ಸ್ಟೋರ್‌ ಹೊಂದಲು ಸಚಿವಾಲಯ ಚಿಂತನೆ ನಡೆಸುತ್ತಿದೆಯೇ ಎನ್ನುವ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಭಾರತವು ಮೊಬೈಲ್ ಆ್ಯಪ್‌ಗಳ ಅತಿದೊಡ್ಡ ಬಳಕೆದಾರ ದೇಶವಾಗಿದೆ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಜೊತೆಗೆ ಆ್ಯಪ್‌ಗಳನ್ನು ರೂಪಿಸಲು ದೇಶದಲ್ಲಿ ಆ್ಯಪ್‌ ಅಭಿವೃದ್ಧಿಪಡಿಸುವವರಿಗೆ ಪ್ರೋತ್ಸಾಹ ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

2021ರ ಭಾರತದ ಆ್ಯಪ್‌ ಮಾರುಕಟ್ಟೆಯ ಅಂಕಿ–ಅಂಶಗಳನ್ನು ಉಲ್ಲೇಖಿಸಿದ ಅವರು, ಆಂಡ್ರಾಯ್ಡ್‌ನಲ್ಲಿ ಇರುವ ಸರಿಸುಮಾರು ಶೇಕಡ 5ರಷ್ಟು ಆ್ಯಪ್‌ಗಳು ಭಾರತೀಯರು ರೂಪಿಸಿದ್ದಾಗಿವೆ ಎಂದಿದ್ದಾರೆ.

ಆರಂಭಿಕ ಹಂತಗಳಲ್ಲಿ ಆ್ಯಪಗಳನ್ನು ಉಚಿತವಾಗಿ ಹೋಸ್ಟ್ ಮಾಡಲು ಸರಿಯಾದ ಭಾರತೀಯ ಆಪ್ ಸ್ಟೋರ್ ಇರಬೇಕು ಎನ್ನುವುದನ್ನು ಸರ್ಕಾರ ಕಂಡುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.