ADVERTISEMENT

ವಿಮಾ ಕಾಯ್ದೆಗೆ ತಿದ್ದುಪಡಿ ಸಾಧ್ಯತೆ

ಪಿಟಿಐ
Published 14 ಜುಲೈ 2024, 15:16 IST
Last Updated 14 ಜುಲೈ 2024, 15:16 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು 2047ರ ವೇಳೆಗೆ ದೇಶದ ಎಲ್ಲ ನಾಗರಿಕರಿಗೂ ವಿಮಾ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ಹಾಗಾಗಿ, ಇದೇ 22ರಿಂದ ಸಂಸತ್‌ನಲ್ಲಿ ಆರಂಭವಾಗಲಿರುವ ಬಜೆಟ್‌ ಅಧಿವೇಶನದಲ್ಲಿ ವಿಮಾ ಕಾಯ್ದೆ 1938ಕ್ಕೆ ತಿದ್ದುಪಡಿ ತರುವ ಸಂಬಂಧ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

ಸಂಯೋಜಿತ ‍ಪರವಾನಗಿ, ಋಣಾತ್ಮಕ ಪರಿಹಾರ ಕುರಿತ ಮಾನದಂಡದಲ್ಲಿ ಸಡಿಲಿಕೆ, ಬಂಡವಾಳ ಹೂಡಿಕೆ ನಿಯಮಾವಳಿಯಲ್ಲಿ ಬದಲಾವಣೆ, ಮಧ್ಯವರ್ತಿಗಳು ಒಂದು ಬಾರಿ ನೋಂದಣಿ ಹಾಗೂ ವಿಮಾ ಕಂಪನಿಗಳು ಇತರೆ ಹಣಕಾಸು ಸೇವೆ ಒದಗಿಸುವ ಬಗ್ಗೆ ತಿದ್ದುಪಡಿ ಮೂಲಕ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕ ಬ್ಯಾಂಕ್‌, ಸಣ್ಣ ಹಣಕಾಸು ಸಂಸ್ಥೆಗಳು ಮತ್ತು ಪಾವತಿ ಬ್ಯಾಂಕ್‌ಗಳೆಂಬ ವರ್ಗೀಕರಣ ಮಾಡಲಾಗಿದೆ. ವಿಮಾ ವಲಯದಲ್ಲೂ ಇದೇ ಮಾದರಿಯ ವರ್ಗೀಕರಣಕ್ಕೆ ನಿರ್ಧರಿಸಿದೆ ಎಂದು ಹೇಳಿವೆ. 

ADVERTISEMENT

ಜೀವ ವಿಮಾ ಕಾಯ್ದೆ ಪ್ರಕಾರ ಜೀವ ವಿಮೆ ಒದಗಿಸುವ ಕಂಪನಿಯು ಆ ಸೌಲಭ್ಯವನ್ನಷ್ಟೇ ವಿಮಾದಾರರಿಗೆ ಕಲ್ಪಿಸಬೇಕಿದೆ. ಸಾಮಾನ್ಯ ಅಥವಾ ಆರೋಗ್ಯ ವಿಮಾ ಸೌಲಭ್ಯ ಒದಗಿಸಲು ಅವಕಾಶವಿಲ್ಲ.

ಸಾಮಾನ್ಯ ವಿಮಾ ಸೌಲಭ್ಯ ಒದಗಿಸುವ ಕಂಪನಿಗಳು ಆರೋಗ್ಯ, ಮೋಟರ್‌, ಅಗ್ನಿ ಅವಘಡ ಸೇರಿ ಇತರೆ ಅವಘಡಗಳಿಗೆ ವಿಮೆ ಸೌಲಭ್ಯವನ್ನಷ್ಟೇ ಒದಗಿಸಲು ಅವಕಾಶವಿದೆ.

ಅಲ್ಲದೆ, ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಗಳ ಪ್ರಕಾರ ಒಂದೇ ಕಂಪನಿಗೆ ಜೀವ ವಿಮೆ, ಸಾಮಾನ್ಯ ಅಥವಾ ಆರೋಗ್ಯ ವಿಮಾ ಸೌಲಭ್ಯ ಒದಗಿಸಲು ಸಂಯೋಜಿತ ಪರವಾನಗಿ ನೀಡುವಂತಿಲ್ಲ.

ತಿದ್ದುಪಡಿ ಮಸೂದೆಯ ಕರಡು ಸಿದ್ಧವಾಗಿದೆ. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ‍ಪಡೆದ ಬಳಿಕ ಅಧಿವೇಶನದಲ್ಲಿ ಮಂಡಿಸಲು ಹಣಕಾಸು ಸಚಿವಾಲಯವು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಸ್ತುತ ದೇಶದಲ್ಲಿ 25 ಜೀವ ವಿಮಾ ಕಂಪನಿಗಳು ಮತ್ತು 32 ಸಾಮಾನ್ಯ ವಿಮಾ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.