ADVERTISEMENT

ಕೇಂದ್ರೋದ್ಯಮಗಳ ಷೇರು ವಿಕ್ರಯ, ಮರು ಖರೀದಿ: ₹ 19,499 ಕೋಟಿ ಸಂಗ್ರಹ

ಪಿಟಿಐ
Published 31 ಜನವರಿ 2021, 14:20 IST
Last Updated 31 ಜನವರಿ 2021, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರೋದ್ಯಮಗಳ (ಸಿಪಿಎಸ್‌ಇ) ಷೇರು ವಿಕ್ರಯ ಮತ್ತು ಷೇರು ಮರುಖರೀದಿ ಪ್ರಕ್ರಿಯೆಯ ಮೂಲಕ ಕೇಂದ್ರ ಸರ್ಕಾರವು 2020–21ನೇ ಹಣಕಾಸು ವರ್ಷದಲ್ಲಿ ಇದುವರೆಗೆ ₹ 19,499 ಕೋಟಿ ಸಂಗ್ರಹಿಸಿದೆ.

ಮಾರ್ಚ್ 31ಕ್ಕೆ ಕೊನೆಯಾಗುವ 2020–21ನೇ ಹಣಕಾಸು ವರ್ಷದಲ್ಲಿ ₹ 2.10 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ದೊಡ್ಡ ಪ್ರಮಾಣದ ಷೇರು ವಿಕ್ರಯ ಮತ್ತು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರು ಮಾರಾಟ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಭಾರಿ ಅಂತರದಲ್ಲಿ ಷೇರುವಿಕ್ರಯದ ಗುರಿ ತಪ್ಪುವ ಸಾಧ್ಯತೆ ಇದೆ.

ADVERTISEMENT

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2020–21ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಸಿಪಿಎಸ್‌ಇಗಳ ಖಾಸಗೀಕರಣ, ಅಲ್ಪ ಪ್ರಮಾಣದ ಷೇರುಗಳ ಮಾರಾಟ ಹಾಗೂ ಷೇರು ಮರುಖರೀದಿ ಪ್ರಕ್ರಿಯೆಗಳ ಮೂಲಕ ₹ 2.1 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಿದ್ದರು.

ಈ ಒಟ್ಟು ಮೊತ್ತದಲ್ಲಿ ₹ 1.20 ಲಕ್ಷ ಕೋಟಿಯನ್ನು ಸಿಪಿಎಸ್‌ಇ ಷೇರು ಮಾರಾಟದಿಂದ ಹಾಘೂ ₹ 90 ಸಾವಿರ ಕೋಟಿಯನ್ನು ಹಣಕಾಸು ಸಂಸ್ಥೆಗಳ ಷೇರುಗಳ ಮಾರಾಟದಿಂದ ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಹಿಂದುಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌), ಭಾರತ್‌ ಡೈನಾಮಿಕ್ಸ್‌, ಐಆರ್‌ಸಿಟಿಸಿ ಮತ್ತು ಎಸ್‌ಎಐಎಲ್‌ ಕಂಪನಿಗಳ ಆಫರ್ ಫಾರ್‌ ಸೇಲ್‌ (ಒಎಫ್‌ಸಿ) ಮೂಲಕ ₹ 12,907 ಕೋಟಿ ಸಂಗ್ರಹವಾಗಿದೆ.

ಐಆರ್‌ಎಫ್‌ಸಿ ಮತ್ತು ಮಜಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಕಂಪನಿಗಳ ಐಪಿಒ ಮೂಲಕ ₹ 1,984 ಕೋಟಿ, ಆರ್‌ಇಟಿಇಎಸ್‌, ಎನ್‌ಟಿಪಿಸಿ, ಕೆಐಒಸಿಎಲ್‌, ಎನ್‌ಎಂಡಿಸಿ ಷೇರು ಮರುಖರೀದಿ ಮೂಲಕ ₹ 2,769 ಕೋಟಿ ಸಂಗ್ರಹವಾಗಿದೆ.

ಏರ್‌ ಇಂಡಿಯಾ, ಬಿಪಿಸಿಎಲ್‌, ಪವನ್‌ ಹನ್ಸ್‌, ಬಿಇಎಂಎಲ್‌, ಶಿಪ್ಪಿಂಗ್ ಕಾರ್ಪೊರೇಷನ್‌, ನೀಲಾಚಲ್‌ ಇಸ್ಪತ್‌ ನಿಗಮ್ ಮತ್ತು ಎಫ್‌ಎಸ್‌ಎನ್‌ಎಲ್‌ ಕಂಪನಿಗಳ ಖಾಸಗೀಕರಣ ಪ್ರಕ್ರಿಯೆ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.