ನವದೆಹಲಿ: ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯು (ಬಿಎಆರ್‌ಸಿ) ಅಭಿವೃದ್ಧಿಪಡಿಸಿರುವ ವಿಕಿರಣ ತಂತ್ರಜ್ಞಾನದ ಮೂಲಕ ಪ್ರಸಕ್ತ ವರ್ಷದಲ್ಲಿ 1 ಲಕ್ಷ ಟನ್‌ನಷ್ಟು ಈರುಳ್ಳಿ ಕಾಪು ದಾಸ್ತಾನು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ದೀರ್ಘಕಾಲದವರೆಗೆ ಈರುಳ್ಳಿಯನ್ನು ಶೇಖರಣೆ ಮಾಡಿದರೆ ಮೊಳಕೆಯೊಡೆಯುತ್ತದೆ. ಇದರಿಂದ ಹೆಚ್ಚಿನ ನಷ್ಟವಾಗಲಿದೆ. ಇದನ್ನು ತಪ್ಪಿಸಲು ಸರ್ಕಾರವು ಈ ತಂತ್ರಜ್ಞಾನದಡಿ ಸಂಸ್ಕರಣೆಯ ಪ್ರಮಾಣವನ್ನು ಹೆಚ್ಚಿಸಲು ತೀರ್ಮಾನಿಸಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಈರುಳ್ಳಿ ರಫ್ತು ಮಾಡುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ಆದರೆ, 2023–24ನೇ ಸಾಲಿನಲ್ಲಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಇಳುವರಿ ಕುಂಠಿತವಾಗಿದೆ. ಇದರಿಂದ ಉತ್ಪಾದನೆಯಲ್ಲಿ ಶೇ 16ರಷ್ಟು (25.47 ದಶಲಕ್ಷ ಟನ್) ಕುಸಿತವಾಗಿದೆ.
‘ಶೇಖರಣೆ ಸಮಸ್ಯೆ ಹಾಗೂ ಪೂರೈಕೆ ಕೊರತೆಯಿಂದಾಗಿ ಈರುಳ್ಳಿ ಬೆಲೆಯಲ್ಲಿ ಏರಿಳಿತ ಸಹಜ. ಹಾಗಾಗಿ, ದೀರ್ಘಕಾಲದವರೆಗೆ ಕೆಡದಂತೆ ಇಡಲು ಹಾಗೂ ಶೇಖರಣೆ ಸಂದರ್ಭದಲ್ಲಿನ ನಷ್ಟ ತಪ್ಪಿಸಲು ವಿಕಿರಣ ತಂತ್ರಜ್ಞಾನ ನೆರವಾಗಲಿದೆ. ಈರುಳ್ಳಿ ಸಂಗ್ರಹಿಸಲು ಈ ತಂತ್ರಜ್ಞಾನ ಅಳವಡಿಸಿಕೊಂಡಿರುವ 50 ಶೈತ್ಯಾಗಾರಗಳನ್ನು ಗುರುತಿಸಲಾಗಿದೆ’ ಎಂದು ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಲಾಗಿತ್ತು. ಶೈತ್ಯಾಗಾರಗಳಲ್ಲಿ 1,200 ಟನ್‌ನಷ್ಟು ಸಂಗ್ರಹಿಸಲಾಗಿತ್ತು. ಸಾಗಣೆಗೆ ಅನುಕೂಲವಾಗುವಂತೆ ಪ್ರಮುಖ ರೈಲ್ವೆ ನಿಲ್ದಾಣಗಳ ಬಳಿ ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷ ನಾಫೆಡ್ ಮತ್ತು ಎನ್‌ಸಿಸಿಎಫ್ ಮೂಲಕ 5 ಲಕ್ಷ ಟನ್ ಈರುಳ್ಳಿ ಕಾಪು ದಾಸ್ತಾನು ಮಾಡಲು ಕೇಂದ್ರ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.