ADVERTISEMENT

ವಾಟ್ಸ್‌ಆ್ಯಪ್‌, ಜೂಮ್‌ ಇಂಟರ್ನೆಟ್‌ ಕರೆ ಸೇವೆಗೆ ಪರವಾನಗಿ?

ಪಿಟಿಐ
Published 22 ಸೆಪ್ಟೆಂಬರ್ 2022, 19:32 IST
Last Updated 22 ಸೆಪ್ಟೆಂಬರ್ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಕರೆ ಮಾಡುವ ಹಾಗೂ ಸಂದೇಶ ರವಾನೆ ಸೇವೆ ಒದಗಿಸುವ ವಾಟ್ಸ್‌ಆ್ಯಪ್‌, ಜೂಮ್‌, ಗೂಗಲ್‌ ಡ್ಯುಒ ಹಾಗೂ ಈ ಮಾದರಿಯ ಇತರ ಆ್ಯಪ್‌ಗಳು ದೇಶದಲ್ಲಿ ಚಟುವಟಿಕೆ ನಡೆಸಲು ಪರವಾನಗಿ ಪಡೆಯಬೇಕು ಎಂದು ಕರಡು ದೂರಸಂಪರ್ಕ ಮಸೂದೆ 2022ರಲ್ಲಿ ಹೇಳಲಾಗಿದೆ.

ಒಟಿಟಿ ವೇದಿಕೆಗಳು ಕೂಡ ದೂರಸಂಪರ್ಕ ಸೇವೆಯ ಭಾಗ ಎಂದು ಕರಡು ಮಸೂದೆಯು ಹೇಳುತ್ತದೆ. ‘ದೂರಸಂಪರ್ಕ ಸೇವೆಗಳು ಮತ್ತು ದೂರಸಂಪರ್ಕ ಜಾಲಕ್ಕಾಗಿ ಸಂಸ್ಥೆ, ಕಂಪನಿಗಳು ಪರವಾನಗಿಯನ್ನು ಪಡೆದುಕೊಳ್ಳಬೇಕಾಗುತ್ತದೆ’ ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ. ಇದನ್ನು ಬುಧವಾರ ಸಂಜೆ ಪ್ರಕಟಿಸಲಾಗಿದೆ.

ದೂರಸಂಪರ್ಕ ಮತ್ತು ಇಂಟರ್ನೆಟ್ ಸೇವಾ ಕಂಪನಿಗಳ ಶುಲ್ಕ ಮತ್ತು ದಂಡವನ್ನು ಮನ್ನಾ ಮಾಡುವ ಅಂಶವನ್ನು ಕೂಡ ಕೇಂದ್ರ ಸರ್ಕಾರವು ಮಸೂದೆಯಲ್ಲಿ ಸೇರಿಸಿದೆ. ದೂರಸಂಪರ್ಕ ಅಥವಾ ಇಂಟರ್ನೆಟ್ ಸೇವಾ ಕಂಪನಿಯು ತನ್ನ ಪರವಾನಗಿಯನ್ನು ವಾಪಸ್ ಮಾಡಿದರೆ, ಆ ಕಂಪನಿ ಪಾವತಿಸಿದ್ದ ಶುಲ್ಕವನ್ನು ಹಿಂದಿರುಗಿಸುವ ಪ್ರಸ್ತಾವ ಕೂಡ ಕರಡು ಮಸೂದೆಯಲ್ಲಿ ಇದೆ.

ADVERTISEMENT

‘ಕರಡು ಮಸೂದೆಯ ಬಗ್ಗೆ ಅಭಿಪ್ರಾಯ ಸಲ್ಲಿಸಬೇಕು’ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ. ಇದಕ್ಕೆ ಸಾರ್ವಜನಿಕರು ಅಕ್ಟೋಬರ್ 20ಕ್ಕೆ ಮೊದಲು ಅಭಿಪ್ರಾಯ ತಿಳಿಸಬೇಕಿದೆ.

ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ಮಾಧ್ಯಮ ಪ್ರತಿನಿಧಿಗಳು, ಭಾರತದಲ್ಲಿ ಸುದ್ದಿ ಪ್ರಕಟಿಸುವ ಉದ್ದೇಶದಿಂದ ರವಾನಿಸುವ ಸಂದೇಶವನ್ನು ತಡೆಯವಂತೆ ಇಲ್ಲ ಎಂದು ಕರಡಿನಲ್ಲಿ ಹೇಳಲಾಗಿದೆ.

ಆದರೆ ಸಾರ್ವಜನಿಕ ತುರ್ತು ಸಂದರ್ಭಗಳಲ್ಲಿ ಅಥವಾ ಸಾರ್ವಜನಿಕ ರಕ್ಷಣೆ, ದೇಶದ ಸಾರ್ವಭೌಮತ್ವ, ಏಕತೆ ಅಥವಾ ಭದ್ರತೆ, ವಿದೇಶಗಳೊಂದಿಗಿನ ಸ್ನೇಹ ಸಂಬಂಧ ಕಾಪಾಡುವ ಉದ್ದೇಶದಿಂದ ಸಂದೇಶವನ್ನು ತಡೆಹಿಡಿಯಲು ಅವಕಾಶ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.