ADVERTISEMENT

ಸಿರಿಧಾನ್ಯ ರಫ್ತು ಉತ್ತೇಜನಕ್ಕೆ ಕೇಂದ್ರ ಕ್ರಮ

ಪಿಟಿಐ
Published 10 ನವೆಂಬರ್ 2022, 14:11 IST
Last Updated 10 ನವೆಂಬರ್ 2022, 14:11 IST
   

ನವದೆಹಲಿ: ಸಿರಿಧಾನ್ಯಗಳ ರಫ್ತು ಉತ್ತೇಜನಕ್ಕೆ ಕೇಂದ್ರ ಸರ್ಕಾರವು ಬೇರೆ ಬೇರೆ ದೇಶಗಳಲ್ಲಿ ಭಾರತೀಯ ರಾಯಭಾರ ಕಚೇರಿಗಳ ನೆರವು ಪಡೆಯುವ ಯೋಜನೆ ರೂಪಿಸಿದೆ. ಈ ಯೋಜನೆಯ ಭಾಗವಾಗಿ ಕೇಂದ್ರವು, ಜಾಗತಿಕ ಮಟ್ಟದಲ್ಲಿ ರಿಟೇಲ್‌ ಸೂಪರ್‌ಮಾರ್ಕೆಟ್‌ ಹೊಂದಿರುವ ವಾಲ್ಮಾರ್ಟ್‌ ಹಾಗೂ ಕಾರುಫಾ ಕಂಪನಿಗಳ ನೆರವನ್ನೂ ಪಡೆಯಲಿದೆ.

ದೇಶಿ ಸಿರಿಧಾನ್ಯಗಳ ಬ್ರ್ಯಾಂಡಿಂಗ್‌ ಮತ್ತು ಪ್ರಚಾರ ಕಾರ್ಯಗಳಿಗೆ ವಿದೇಶಗಳಲ್ಲಿನ ರಾಯಭಾರ ಕಚೇರಿಗಳ ಸಹಾಯ ‍ಪಡೆಯಲಾಗುತ್ತದೆ. ಸಿರಿಧಾನ್ಯಗಳನ್ನು ಖರೀದಿಸುವ ದೊಡ್ಡ ಅಂಗಡಿಗಳು, ಸೂಪರ್‌ಮಾರ್ಕೆಟ್‌ಗಳು, ಹೈಪರ್‌ಮಾರ್ಕೆಟ್‌ಗಳನ್ನು ಗುರುತಿಸಲು ಸೂಚಿಸಲಾಗುತ್ತದೆ.

ರಫ್ತು ಉತ್ತೇಜನಾ ಕಾರ್ಯತಂತ್ರದ ಭಾಗವಾಗಿ ಲುಲು ಸಮೂಹ, ಕಾರುಫಾ, ಅಲ್ ಜಜೀರಾ, ಅಲ್ ಮಯ, ವಾಲ್ಮಾರ್ಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು, ಅವುಗಳಲ್ಲಿ ಸಿರಿಧಾನ್ಯಗಳು ಲಭ್ಯವಿರುವಂತೆ ಮಾಡಲಾಗುತ್ತದೆ ಎಂದು ವಾಣಿಜ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ADVERTISEMENT

ಯಾವ ದೇಶಗಳಲ್ಲಿ ಸಿರಿಧಾನ್ಯಗಳ ಮಾರಾಟಕ್ಕೆ ಗಮನ ನೀಡಲಾಗುತ್ತದೆಯೋ ಆ ದೇಶಗಳ ಭಾರತದಲ್ಲಿನ ರಾಯಭಾರಿಗಳನ್ನು ಸಿರಿಧಾನ್ಯ ಆಧಾರಿತ ಉತ್ಪನ್ನಗಳ ಪ್ರದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಿರಿಧಾನ್ಯಗಳ ರಫ್ತು ಉತ್ತೇಜನ ಪ್ರಯತ್ನವು ಡಿಸೆಂಬರ್‌ನಿಂದ ಶುರುವಾಗಲಿದೆ.

ವಿಶ್ವ ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ 2023ನೆಯ ಇಸವಿಯನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಲಾಗಿದೆ. ಭಾರತದ ಸಿರಿಧಾನ್ಯಗಳನ್ನು ಮತ್ತು ಅವುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ವಿಶ್ವದ ಎಲ್ಲೆಡೆ ಜನಪ್ರಿಯಗೊಳಿಸುವುದು ಕೇಂದ್ರದ ಉದ್ದೇಶ.

2023ರ ಗಲ್ಫ್‌ ಫುಡ್ ಕಾರ್ಯಕ್ರಮ, ಸೋಲ್ ಫುಡ್‌ ಆ್ಯಂಡ್ ಹೋಟೆಲ್ ಶೋ, ಸೌದಿ ಆ್ಯಗ್ರೊ ಫುಡ್, ಸಿಡ್ನಿಯ ಫೈನ್ ಫುಡ್ ಶೋ, ಬೆಲ್ಜಿಯಂ ಫುಡ್‌ ಆ್ಯಂಡ್ ಬೆವರೇಜಸ್ ಶೋ ಕಾರ್ಯಕ್ರಮಗಳಲ್ಲಿ ಸಿರಿಧಾನ್ಯಗಳು ಹಾಗೂ ಅವುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶಿಸುವ ಆಲೋಚನೆಯನ್ನು ಸಚಿವಾಲಯ ಹೊಂದಿದೆ.

2021–22ರಲ್ಲಿ ದೇಶವು ಒಟ್ಟು ₹ 278 ಕೋಟಿ ಮೊತ್ತದ ಸಿರಿಧಾನ್ಯ ಉತ್ಪನ್ನಗಳನ್ನು ರಫ್ತು ಮಾಡಿದೆ. 2025ರ ವೇಳೆಗೆ ಸಿರಿಧಾನ್ಯಗಳ ಮಾರುಕಟ್ಟೆಯು ₹ 97 ಸಾವಿರ ಕೋಟಿಗೆ ತಲುಪುವ ಅಂದಾಜು ಇದೆ. ಈಗ ಸಿರಿಧಾನ್ಯ ಮಾರುಕಟ್ಟೆ ಗಾತ್ರ ₹ 72 ಸಾವಿರ ಕೋಟಿ.

ಇಂಡೊನೇಷ್ಯಾ, ಬೆಲ್ಜಿಯಂ, ಜಪಾನ್, ಜರ್ಮನಿ, ಮೆಕ್ಸಿಕೊ, ಇಟಲಿ, ಅಮೆರಿಕ, ಬ್ರಿಟನ್, ಬ್ರೆಜಿಲ್ ಮತ್ತು ನೆದರ್ಲೆಂಡ್ಸ್ ದೇಶಗಳು ಸಿರಿಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.