ADVERTISEMENT

₹29ಕ್ಕೆ ಕೆ.ಜಿ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ

ಪಿಟಿಐ
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಮುಂದಿನ ವಾರ
ದಿಂದ ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರವು ಶುಕ್ರವಾರ ತಿಳಿಸಿದೆ.

ಈಗಾಗಲೇ, ‘ಭಾರತ್‌ ಬ್ರ್ಯಾಂಡ್‌’ ಗೋಧಿ ಹಿಟ್ಟು ಮತ್ತು ಕಡಲೆ ಬೇಳೆ ಮಾರಾಟವಾಗುತ್ತಿವೆ. ಪ್ರತಿ ಕೆ.ಜಿ ಅಕ್ಕಿಗೆ ₹29 ದರ ನಿಗದಿಪಡಿಸಲಾಗಿದ್ದು, 5 ಕೆ.ಜಿ ಮತ್ತು 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ದೊರೆಯಲಿದೆ ಎಂದು ಮಾಹಿತಿ ನೀಡಿದೆ. 

ADVERTISEMENT

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್‌) ಮತ್ತು ಕೇಂದ್ರೀಯ ಭಂಡಾರದ ಮಳಿಗೆಗಳಲ್ಲಿ ಅಕ್ಕಿ ಮಾರಾಟಕ್ಕೆ ನಿರ್ಧರಿಸಲಾಗಿದೆ. ಇ–ಕಾರ್ಮಸ್‌ ವೇದಿಕೆಗಳಲ್ಲೂ ಖರೀದಿಗೆ ಲಭ್ಯವಿದೆ ಎಂದು ತಿಳಿಸಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ 14.5 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇ 15.5ರಷ್ಟು ಅಕ್ಕಿ ದರ ಏರಿಕೆಯಾಗಿದೆ. ಬೆಲೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ, ದಾಸ್ತಾನು ಮಾಡಿರುವ ಅಕ್ಕಿ ಮತ್ತು ಭತ್ತದ ಪ್ರಮಾಣವನ್ನು ವರ್ತಕರು, ಗಿರಣಿ ಮಾಲೀಕರು ಬಹಿರಂಗಪಡಿಸಬೇಕು ಎಂದು ಸೂಚಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್‌ ಚೋಪ್ರಾ, ‘ಅಕ್ಕಿ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುವವರೆಗೂ ಈ ನಿರ್ಬಂಧ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

ಮೊದಲ ಹಂತದಲ್ಲಿ ಚಿಲ್ಲರೆ ಮಾರುಕಟ್ಟೆಗೆ 5 ಲಕ್ಷ ಟನ್‌ನಷ್ಟು ಅಕ್ಕಿಯನ್ನು ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.

ಸಗಟು ದರ ಕ್ವಿಂಟಲ್‌ಗೆ ₹200 ಇಳಿಕೆ

ಬೆಂಗಳೂರು: ‘ಭಾರತ್‌ ಬ್ರ್ಯಾಂಡ್‌’ ಅಕ್ಕಿಯು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿರುವ ಬೆನ್ನಲ್ಲೇ, ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಧಾರಣೆಯು ಒಂದು ಕ್ವಿಂಟಲ್‌ಗೆ ₹200 ಇಳಿಕೆಯಾಗಿದೆ.

ಕರ್ನಾಟಕದಿಂದ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗುಜರಾತ್‌ ಹಾಗೂ ಛತ್ತೀಸಗಢಕ್ಕೆ ಅಕ್ಕಿ ಪೂರೈಕೆಯಾಗುತ್ತದೆ. ಅಲ್ಲಿನ ಖರೀದಿದಾರರು ನೇರವಾಗಿ ಇಲ್ಲಿನ ಗಿರಣಿಗಳಿಗೆ ಬಂದು ಅಕ್ಕಿ ಖರೀದಿಸುತ್ತಾರೆ. ಆದರೆ, ‘ಭಾರತ್‌ ಬ್ರ್ಯಾಂಡ್’ ಅಕ್ಕಿ ಮಾರಾಟ ಆರಂಭ ಆಗುತ್ತಿರುವುದರಿಂದ ಹೊರರಾಜ್ಯಗಳ ಖರೀದಿದಾರರು ಬರುತ್ತಿಲ್ಲ. ಇದೇ ಸಗಟು ದರ ಇಳಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಗಿರಣಿ ಮಾಲೀಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.